ಜನವರಿ 2018

ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ:
ನಿಮ್ಮ ಪ್ರಶ್ನೆಗಳನ್ನು ಈ ವಿಳಾಸಕ್ಕೆ ಕಳುಹಿಸಿ. 
ವಿಳಾಸ: ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 560018.
ಇ-ಮೇಲ್: sarakaricorner@gmail.com
ದೂರವಾಣಿ: 8884431909, ಫ್ಯಾಕ್ಸ್: 080-26257464.
===========================================
 31.01.2018.
2018ರ ಮಾರ್ಚ್ 31ರಂದು ವಯೋನಿವೃತ್ತರಾಗಲಿರುವ ಸರ್ಕಾರಿ ನೌಕರನಿಗೆ ಎಷ್ಟು ದಿನ ಸಾಂರ್ದಭಿಕ ರಜೆಗಳನ್ನು ಮುಂಗಡವಾಗಿ ಜಮೆ ಮಾಡಬಹುದು, ಹಾಗೂ ಹೊಸದಾಗಿ ಸೇರಿದ ನೌಕರನಿಗೆ ನಿರ್ಬಂಧಿತ ರಜೆಯನ್ನು ಮುಂಗಡವಾಗಿ ಜಮೆ ಮಾಡಬಹುದು?
| ಪ. ಚಂದ್ರಕುಮಾರ್ ಗೌನಹಳ್ಳಿ ಚಿತ್ರದುರ್ಗ.
ಕರ್ನಾಟಕ ಸರ್ಕಾರ ಸೇವಾ ನಿಯಮಾವಳಿಯ ಅನುಬಂಧ (ಬಿ) ರಂತೆ ಸರ್ಕಾರಿ ನೌಕರನಿಗೆ ಒಂದು ಕ್ಯಾಲೆಂಡರ್ ವರ್ಷದಲ್ಲಿ 15 ದಿನಗಳ ಕಾಲ ಸಾಂರ್ದಭಿಕ ರಜೆ ಲಭ್ಯವಾಗುತ್ತದೆ. 2018ರ ಮಾರ್ಚ್ 31ರಂದು ವಯೋನಿವೃತ್ತರಾಗಲಿರುವ ಸರ್ಕಾರಿ ನೌಕರನಿಗೆ 15 ದಿನಗಳ ಕಾಲ ಸಾಂರ್ದಭಿಕ ರಜೆಯನ್ನು ಜಮೆ ಮಾಡಬಹುದು. ಹೊಸದಾಗಿ ಸೇರುವ ನೌಕರನಿಗೆ ಎರಡು ದಿನಗಳ ಕಾಲ ನಿರ್ಬಂಧಿತ ರಜೆಯನ್ನು ನೀಡಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
***
 30-01-2018.
ನಾನು ಹಿಂದುಗಳ ಪವಿತ್ರಾ ಯಾತ್ರಾಸ್ಥಳವಾದ ಮಾನಸಸರೋವರ ಮತ್ತು ಕೈಲಾಸಪರ್ವತಕ್ಕೆ ಹೋಗಬೇಕೆಂದು ಇಚ್ಛಿಸಿರುತ್ತೇನೆ. ನಾನು ಇಲ್ಲಿಗೆ ಹೋಗಲು ಇಲಾಖಾ ಮುಖ್ಯಸ್ಥರ ಅಥವಾ ಸರ್ಕಾರದ ಅನುಮತಿ ಪಡೆದುಕೊಳ್ಳುವುದು ಆವಶ್ಯಕವೆ?
| ಕಮಲಾ ನಾಗೇಶ್ವರರಾವ್ ಧಾರವಾಡ.
ನೀವು ಮಾನಸಸರೋವರಕ್ಕೆ ಹೋಗಲು ಸರ್ಕಾರದ ಅನುಮತಿ ಆವಶ್ಯಕ. ಮಾನಸಸರೋವರವು ಚೀನಾದೇಶದಲ್ಲಿರುವುದರಿಂದ ಹಾಗೂ ಅದು ವಿದೇಶಿ ಪ್ರವಾಸವಾಗಿರುವುದರಿಂದ ಇದಕ್ಕೆ ವೀಸಾ ಪಾಸ್​ಪೋರ್ಟ್ ಬಳಸಬೇಕಾಗುತ್ತದೆ. ಆದ್ದರಿಂದ ಸ್ವಂತ ಖರ್ಚಿನಲ್ಲಿ ಸರ್ಕಾರದ ಅಥವಾ ಇಲಾಖಾ ಮುಖ್ಯಸ್ಥರಿಂದ ಅನುಮತಿ ಪಡೆದು ಹೋಗಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವಂತಹ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕವನ್ನು ನೋಡಬಹುದು.
***
29-01-2018.
 ನಾನು 20-10-2010ರಂದು ಅರಣ್ಯ ಇಲಾಖೆಯಲ್ಲಿ ಬೆರಳಚ್ಚುಗಾರನಾಗಿ ಸೇವೆಗೆ ಸೇರಿ ಏಳು ವರ್ಷ ಸೇವೆ ಪೂರೈಸಿದ್ದೇನೆ. ಈಗ ವೃಂದ ಬದಲಾವಣೆಗೆ ಅರ್ಜಿ ಸಲ್ಲಿಸಿದರೆ ಮೇಲಾಧಿಕಾರಿಯವರು ಪಿಯುಸಿ ತೇರ್ಗಡೆಯಾಗಬೇಕು ಎನ್ನುತ್ತಿದ್ದಾರೆ. ನಾನು ಐ.ಟಿ.ಐ.ನಲ್ಲಿ ತೇರ್ಗಡೆ ಆಗಿದ್ದು ಇದನ್ನು ಪರಿಗಣಿಸಬಹುದೆ?
| ಪಾಂಡುರಂಗ ಧವಳೇಶ್ವರ ಬಾಗಲಕೋಟೆ.
ಕರ್ನಾಟಕ ಸರ್ಕಾರ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಾವಳಿ 1973ರ ಪ್ರಕಾರ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಪಿಯುಸಿ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು. ದಿನಾಂಕ: 27-01-2015ರ ಸರ್ಕಾರಿ ಸುತ್ತೋಲೆ ಸಂಖ್ಯೆ: ಡಿಪಿ.ಎ.ಆರ್ 147 ಎಸ್​ಸಿಎ2014ರ ರೀತ್ಯ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಐ.ಟಿ.ಐ. ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷ ಡಿಪ್ಲೊಮೋ ಪಡೆದಿದ್ದರೂ ನೇಮಿಸಿಕೊಳ್ಳಬಹುದೆಂದು ಸೂಚಿಸಲಾಗಿದೆ. ಹೀಗಿರುವಲ್ಲಿ ನೀವು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವೃಂದ ಬದಲಾವಣೆ ಮಾಡಿಕೊಳ್ಳಲು ಐ.ಟಿ.ಐ. ವಿದ್ಯಾರ್ಹತೆಯನ್ನು ಪರಿಗಣಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕವನ್ನು ನೋಡಬಹುದು.
***
  28.01.2018.
ನನ್ನ ತಾಯಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ನಾನು ಎರಡು ವರ್ಷ ವಯಸ್ಸಾಗಿದ್ದಾಗ ತಂದೆ-ತಾಯಿ ಮರಣ ಹೊಂದಿದರು. ಅವರು ತೀರಿಕೊಂಡು ಸುಮಾರು ಇಪ್ಪತ್ತು ವರ್ಷಗಳಾಗಿವೆ. ಈ ಅನುಕಂಪದ ನೇಮಕಾತಿಯ ಬಗ್ಗೆ ಗೊತ್ತಿರಲಿಲ್ಲ. ನಾನೀಗ ಎಂ.ವಿ.ಪದವೀಧರಳಾಗಿದ್ದು ಅನುಕಂಪದ ಆಧಾರದ ಮೇಲೆ ಈಗ ನನ್ನ ತಾಯಿಯ ಸರ್ಕಾರಿ ನೌಕರಿಯನ್ನು ಪಡೆಯಬಹುದೆ?
| ಭೂಮಿಕಾ ದೇಸಾಯಿ ಧಾರವಾಡ.
1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಾವಳಿ ರೀತ್ಯ ಸರ್ಕಾರಿ ನೌಕರನು ನಿಧನ ಹೊಂದಿದ ಒಂದು ವರ್ಷದೊಳಗಾಗಿ ಅನುಕಂಪದ ಮೇರೆಗೆ ನೌಕರಿಯನ್ನು ಪಡೆಯುವ ಅವಲಂಬಿತರು 18 ವರ್ಷ ಪೂರೈಸಿದ್ದು ನಿಗದಿತ ವಿದ್ಯಾರ್ಹತೆ ಹೊಂದಿದ್ದರೆ ಅರ್ಜಿ ಸಲ್ಲಿಸಬೇಕು. ಅಂತಹವರಿಗೆ ಈ ಅನುಕಂಪದ ಆಧಾರದ ಮೇಲೆ ನೌಕರಿ ಲಭ್ಯವಾಗುತ್ತದೆ. ಆದರೆ ನಿಮ್ಮ ತಾಯಿ ಮರಣ ಹೊಂದಿ ಇಪ್ಪತ್ತು ವರ್ಷಗಳಾಗಿರುವುದರಿಂದ ಲಭ್ಯವಾಗುವುದಿಲ್ಲ.
***
 27-01-2018.
ನಾನು 2012ರ ಏಪ್ರಿಲ್ 5ರಂದು ಪೊಲೀಸ್ ಪೇದೆಯಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸಿದೆ. 2016ರಲ್ಲಿ ಇಲಾಖೆಯಿಂದ ಅನುಮತಿ ಪಡೆದುಕೊಂಡು ನ್ಯಾಯಾಂಗ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಹಾಜರಾಗಿದ್ದೇನೆ. ನಾನು ಪೊಲೀಸ್ ಇಲಾಖೆಗೆ ಮರಳಿ ಹೋಗುವುದಕ್ಕೆ ಕರ್ನಾಟಕ ಸರ್ಕಾರದ ಸೇವಾ ನಿಯಮಾವಳಿಗಳಲ್ಲಿ ಅವಕಾಶ ಇದೆಯೇ? ದಯವಿಟ್ಟು ವಿವರ ನೀಡಿ.
| ಉದಯ ರೆಡ್ಡಿ ರಾಯಚೂರು.
ಕರ್ನಾಟಕ ಸರ್ಕಾರದ ಸೇವಾ ನಿಯಮಾವಳಿಯ ನಿಯಮ 20ರ ಮೇರೆಗೆ ಹುದ್ದೆಯ ಹಕ್ಕನ್ನು ಕಾಯ್ದಿರಿಸಲು ವಿನಂತಿಸಿ ನಿಯಮ 252(ಬಿ) ರಂತೆ ಬಿಡುಗಡೆ ಹೊಂದಿರಬೇಕು. ನೀವು ಎರಡು ವರ್ಷಗಳೊಳಗಾಗಿ ನ್ಯಾಯಾಂಗ ಇಲಾಖೆಯಿಂದ ಪೊಲೀಸ್ ಇಲಾಖೆಗೆ ವಾಪಸ್ಸು ಹೋಗಬಹುದು. 
***
***
 ಸರ್ಕಾರಿ ಕಾರ್ನರ್.
  28.01.2018.
ನನ್ನ ತಾಯಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ನಾನು ಎರಡು ವರ್ಷ ವಯಸ್ಸಾಗಿದ್ದಾಗ ತಂದೆ-ತಾಯಿ ಮರಣ ಹೊಂದಿದರು. ಅವರು ತೀರಿಕೊಂಡು ಸುಮಾರು ಇಪ್ಪತ್ತು ವರ್ಷಗಳಾಗಿವೆ. ಈ ಅನುಕಂಪದ ನೇಮಕಾತಿಯ ಬಗ್ಗೆ ಗೊತ್ತಿರಲಿಲ್ಲ. ನಾನೀಗ ಎಂ.ವಿ.ಪದವೀಧರಳಾಗಿದ್ದು ಅನುಕಂಪದ ಆಧಾರದ ಮೇಲೆ ಈಗ ನನ್ನ ತಾಯಿಯ ಸರ್ಕಾರಿ ನೌಕರಿಯನ್ನು ಪಡೆಯಬಹುದೆ?
| ಭೂಮಿಕಾ ದೇಸಾಯಿ ಧಾರವಾಡ.
1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಾವಳಿ ರೀತ್ಯ ಸರ್ಕಾರಿ ನೌಕರನು ನಿಧನ ಹೊಂದಿದ ಒಂದು ವರ್ಷದೊಳಗಾಗಿ ಅನುಕಂಪದ ಮೇರೆಗೆ ನೌಕರಿಯನ್ನು ಪಡೆಯುವ ಅವಲಂಬಿತರು 18 ವರ್ಷ ಪೂರೈಸಿದ್ದು ನಿಗದಿತ ವಿದ್ಯಾರ್ಹತೆ ಹೊಂದಿದ್ದರೆ ಅರ್ಜಿ ಸಲ್ಲಿಸಬೇಕು. ಅಂತಹವರಿಗೆ ಈ ಅನುಕಂಪದ ಆಧಾರದ ಮೇಲೆ ನೌಕರಿ ಲಭ್ಯವಾಗುತ್ತದೆ. ಆದರೆ ನಿಮ್ಮ ತಾಯಿ ಮರಣ ಹೊಂದಿ ಇಪ್ಪತ್ತು ವರ್ಷಗಳಾಗಿರುವುದರಿಂದ ಲಭ್ಯವಾಗುವುದಿಲ್ಲ.
***
 27-01-2018.
ನಾನು 2012ರ ಏಪ್ರಿಲ್ 5ರಂದು ಪೊಲೀಸ್ ಪೇದೆಯಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸಿದೆ. 2016ರಲ್ಲಿ ಇಲಾಖೆಯಿಂದ ಅನುಮತಿ ಪಡೆದುಕೊಂಡು ನ್ಯಾಯಾಂಗ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಹಾಜರಾಗಿದ್ದೇನೆ. ನಾನು ಪೊಲೀಸ್ ಇಲಾಖೆಗೆ ಮರಳಿ ಹೋಗುವುದಕ್ಕೆ ಕರ್ನಾಟಕ ಸರ್ಕಾರದ ಸೇವಾ ನಿಯಮಾವಳಿಗಳಲ್ಲಿ ಅವಕಾಶ ಇದೆಯೇ? ದಯವಿಟ್ಟು ವಿವರ ನೀಡಿ.
| ಉದಯ ರೆಡ್ಡಿ ರಾಯಚೂರು.
ಕರ್ನಾಟಕ ಸರ್ಕಾರದ ಸೇವಾ ನಿಯಮಾವಳಿಯ ನಿಯಮ 20ರ ಮೇರೆಗೆ ಹುದ್ದೆಯ ಹಕ್ಕನ್ನು ಕಾಯ್ದಿರಿಸಲು ವಿನಂತಿಸಿ ನಿಯಮ 252(ಬಿ) ರಂತೆ ಬಿಡುಗಡೆ ಹೊಂದಿರಬೇಕು. ನೀವು ಎರಡು ವರ್ಷಗಳೊಳಗಾಗಿ ನ್ಯಾಯಾಂಗ ಇಲಾಖೆಯಿಂದ ಪೊಲೀಸ್ ಇಲಾಖೆಗೆ ವಾಪಸ್ಸು ಹೋಗಬಹುದು. 
***
26-01-2018.
ನಾನು 2010ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆಗೆ ಸೇರಿದ್ದೆ. ಆ ನಂತರ ನಿರಾಕ್ಷೇಪಣ ಪತ್ರವನ್ನು ಪಡೆದು 2016ರಲ್ಲಿ ಪಿಎಸ್​ಐ ಆಗಿ ನೇಮಕ ಹೊಂದಿದ್ದೇನೆ. ಈ ಹುದ್ದೆಗೆ ನನ್ನ ಹಿಂದಿನ ಸೇವೆಯನ್ನು ಕೂಡ ಪರಿಗಣಿಸುತ್ತಾರೆಯೆ? ನನಗೆ ಯಾವ ಯಾವ ಸೇವಾಸೌಲಭ್ಯಗಳು ದೊರಕುತ್ತವೆ?
| ಡಿ. ಸಂತೋಷ ಕೊಪ್ಪಳ.
ಕರ್ನಾಟಕ ಸರ್ಕಾರದ ಸೇವಾ ನಿಯಮಾವಳಿಯ ನಿಯಮ 252ಬಿ ರಂತೆ ಶಾಲಾ ಶಿಕ್ಷಕ ಹುದ್ದೆಯಿಂದ ಬಿಡುಗಡೆಯಾಗಿ ಪಿ.ಎಸ್.ಐ. ಹುದ್ದೆಗೆ ಸೇರಿದ್ದರೆ ವೇತನ ರಕ್ಷಣೆ, ರಜೆ ಸೌಲಭ್ಯಗಳು ದೊರೆಯುತ್ತವೆ. ಅಷ್ಟೇ ಅಲ್ಲ, ಹೊಸ ಹುದ್ದೆಯಲ್ಲೂ ಎನ್.ಪಿ.ಎಸ್. ಕೆ.ಜಿ.ಐ.ಡಿ, ಸೌಲಭ್ಯಗಳು ಮುಂದುವರಿಯುತ್ತವೆ.
***
  25-01-2018.
ನಾನು ಅನುಕಂಪದ ಆಧಾರದ ಮೇಲೆ 2004ರಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಸೇವೆಗೆ ಸೇರಿದ್ದೇನೆ. 2017ರಲ್ಲಿ ಕಿಯಾನಿಕ್ಸ್ ಅವರು ನಡೆಸಿದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಗರಿಷ್ಠ ಅಂಕ 80ಕ್ಕೆ 34 ಅಂಕಗಳನ್ನು ಪಡೆದಿದ್ದೇನೆ. ನಾನು ಈ ಪರೀಕ್ಷೆ ತೆಗೆದುಕೊಳ್ಳಬೇಕೆ? 50 ವರ್ಷ ವಯಸ್ಸಾಗಿರುವ ನನಗೆ ಈ ಪರೀಕ್ಷೆಯಿಂದ ವಿನಾಯಿತಿ ಇದೆಯೇ?
| ಬಿ. ಸುವರ್ಣ ಹಾವೇರಿ.
ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ಪ್ರಕಾರ ಈ ನಿಯಮವು ಜಾರಿಗೆ ಬಂದ ದಿನಾಂಕ : 22 ಮಾರ್ಚ್ 2012ರ ಪೂರ್ವದಲ್ಲಿ ಸರ್ಕಾರಿಸೇವೆಗೆ ಸೇರಿದ ನೌಕರರು ಶೇ. 35ರಷ್ಟು ಅಂದರೆ, 80ಕ್ಕೆ 28 ಅಂಕಗಳನ್ನು ಗಳಿಸಿದರೆ ಸಾಕು. ಜಾರಿ ದಿನಾಂಕದಂದು 50 ವರ್ಷವಾಗಿದ್ದರೆ ಈ ಪರೀಕ್ಷೆಯಿಂದ ವಿನಾಯಿತಿಯಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ಕಂಪ್ಯೂಟರ್ ಸಾಕ್ಷರತಾ ಕೈಪಿಡಿಯನ್ನು ನೋಡಬಹುದು.
***
24-01-2018.
ನಾನು ವಿದ್ಯಾ ಇಲಾಖೆಯಲ್ಲಿ ಸೇವೆಗೆ ಸೇರಿ ವಯೋನಿವೃತ್ತಿ ಹೊಂದಿದ್ದು ನನ್ನ ಪತಿ ಸಹ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಿಧನ ಹೊಂದಿದರು. ಅಂದಿನಿಂದ ನಾನು ಕುಟುಂಬ ನಿವೃತ್ತಿವೇತನವನ್ನು ಪಡೆಯುತ್ತಿದ್ದೇನೆ. ನನ್ನ ಮಗನಿಗೆ ಆರೋಗ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕವಾಗಿದ್ದು ನನ್ನ ಮತ್ತು ನನ್ನ ಪತಿಯ ಕುಟುಂಬ ವೇತನವನ್ನು ಪಡೆಯುತ್ತಿರುವುದರಿಂದ ಅನುಕಂಪದ ಮೇಲೆ ನೇಮಕವಾದ ನನ್ನ ಮಗನಿಗೆ ಮುಂದೇನಾದರೂ ಕಾನೂನಿನ ತೊಡಕಾಗುತ್ತದೆಯೆ?
| ರೋಹಿಣಿ ಎಂ. ಹೊಳ್ಳ ಮಂಗಳೂರು
2002ರ ಕುಟುಂಬ ನಿವೃತ್ತಿವೇತನ ನಿಯಮಾವಳಿಯ ರೀತ್ಯ ಪತಿ-ಪತ್ನಿ ಇಬ್ಬರಿಗೂ ಸಂದಾಯವಾಗಬೇಕಾದ ಕುಟುಂಬ ವೇತನವನ್ನು ನೀವು ಪಡೆಯುತ್ತಿದ್ದರೂ ಅನುಕಂಪದ ಮೇಲೆ ನೇಮಕವಾದ ನಿಮ್ಮ ಮಗನ ಭವಿಷ್ಯದ ದೃಷ್ಟಿಯಿಂದ ಯಾವುದೇ ತೊಡಕು ಉಂಟಾಗುವುದಿಲ್ಲ. ಆದರೆ ಒಟ್ಟು ಕುಟುಂಬ ನಿವೃತ್ತಿ ವೇತನವು 39,600 ರೂ.ಗಳು ಮಾಸಿಕವಾಗಿ ಮೀರಬಾರದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದಾಗಿದೆ.
***
 23-01-2018.
ಮೇಲಧಿಕಾರಿಗಳ ಆದೇಶದಂತೆ ನನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಯ ಮಕ್ಕಳ ನೇತ್ರ ತಪಾಸಣೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೇತ್ರರೋಗಿಗಳ ಪರೀಕ್ಷೆ ಮಾಡಲು ಹೋಗುತ್ತಿದ್ದೇನೆ. ನನಗೆ 5 ವರ್ಷಗಳಿಂದ ಯಾವುದೇ ಪ್ರವಾಸಭತ್ಯೆ ಹಾಗೂ ದಿನಭತ್ಯೆ ಸಂದಾಯವಾಗಿಲ್ಲ. ಈ ಭತ್ಯೆಗಳನ್ನು ಪಡೆದುಕೊಳ್ಳುವುದು ಹೇಗೆ?
| ಸುಭಾಷ್ ಚೌಗಲೆ ಬೆಳಗಾವಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 491ರಂತೆ ಯಾರೇ ಸರ್ಕಾರಿ ನೌಕರನು ಕರ್ತವ್ಯನಿಮಿತ್ತ ವ್ಯಾಪಕವಾಗಿ ಪ್ರಯಾಣ ಮಾಡಬೇಕಾಗಿದೆಯೋ ಅವನಿಗೆ ಖಾಯಂ ಮಾಸಿಕ ಪ್ರಯಾಣಭತ್ಯೆ ಮಂಜೂರು ಮಾಡಬಹುದೆನ್ನಲಾಗಿದೆ. ಸರ್ಕಾರಿ ನೌಕರನ ಕಾರ್ಯವ್ಯಾಪ್ತಿಯೊಳಗೆ ಕೈಗೊಳ್ಳುವ ಪ್ರಯಾಣಭತ್ಯೆಯ ಬದಲಾಗಿ ಅಂಥ ಭತ್ಯೆಯನ್ನು ಮಂಜೂರು ಮಾಡಬಹುದು ಮತ್ತು ವರ್ಷಪೂರ್ತಿ ಪಡೆಯಬಹುದು. ನೀವು ನಿಯಮ 494ರ ಅಡಿಯಲ್ಲಿ ಮಾಸಿಕ ಪ್ರಯಾಣಭತ್ಯೆಯೊಂದಿಗೆ ಹೆಚ್ಚಿನ ದಿನಭತ್ಯೆಯನ್ನೂ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದಾಗಿದೆ.
***
22-01-2018.
 ನಾನು ಸರ್ಕಾರಿ ನೌಕರ. ನಮಗೆ ಇನ್ನೂ ಮಗುವಾಗದ ಕಾರಣ ನನ್ನ ಸಹೋದರನು ಮಗುವನ್ನು ದತ್ತು ಕೊಡಲು, 2017ರ ಫೆಬ್ರವರಿ ಮೊದಲ ವಾರದಲ್ಲಿ ಡೆಲಿವರಿ ಸಮಯದಲ್ಲಿ ಒಪ್ಪಿದ್ದಾರೆ. ಮಗುವನ್ನು ದತ್ತು ತೆಗೆದುಕೊಳ್ಳುವುದು ಹೇಗೆ? ನನ್ನ ಸೇವಾಪುಸ್ತಕದಲ್ಲಿ ಹೇಗೆ ನಾಮನಿರ್ದೇಶನ ಮಾಡಿಸಬೇಕು? ಮಾರ್ಗದರ್ಶನ ಮಾಡಿ.
| ವಿಜಯಕುಮಾರ್ ದಾವಣಗೆರೆ.
ಹಿಂದು ದತ್ತಕ ಕಾಯ್ದೆ ಅಡಿಯಲ್ಲಿ ನೀವು ಮಗುವನ್ನು ದತ್ತು ತೆಗೆದುಕೊಳ್ಳಬೇಕು. ದತ್ತು ತೆಗೆದುಕೊಂಡ ಮಗುವನ್ನು ನೋಂದಣಿ ಮಾಡಿಸಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 302ರಂತೆ ನಿಮ್ಮ ದತ್ತಕ ಮಗುವನ್ನು ನಾಮ ನಿರ್ದೇಶನ ಮಾಡಿಸಬೇಕು. ಆಗ ನಿಮ್ಮ ಸ್ವಂತ ಮಗುವಿಗೆ ದೊರಕುವಂತೆ ಎಲ್ಲ ಸರ್ಕಾರಿ ಸೌಲಭ್ಯಗಳು ಈ ಮಗುವಿಗೂ ದೊರಕುತ್ತದೆ.
***
 21-01-2018.
ನಾನು ಮೊದಲ ಸರ್ಕಾರಿ ಹುದ್ದೆಗೆ ಸಿಂಧುತ್ವ ಪ್ರಮಾಣಪತ್ರ ನೀಡಿ ಆಯ್ಕೆಯಾಗಿ, ಮೂರು ವರ್ಷ ಸೇವೆ ಸಲ್ಲಿಸಿದ್ದೇನೆ. ಈಗ ಅದೇ ಇಲಾಖೆಯ ಇನ್ನೊಂದು ಹುದ್ದೆಗೆ ಅನುಮತಿಯೊಂದಿಗೆ ನೇರ ನೇಮಕಾತಿಯಲ್ಲಿ ಅದೇ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದೇನೆ. ಮತ್ತೊಮ್ಮೆ ಸಿಂಧುತ್ವ ಪ್ರಮಾಣಪತ್ರವನ್ನು ಮಾಡುವ ಆವಶ್ಯಕತೆ ಇದೆಯೆ?
| ಅಭಿಲಾಷ್ ಚಿಕ್ಕಮಗಳೂರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಅಧಿನಿಯಮ 1992ರಡಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯ ಸಿಂಧುತ್ವ ಪ್ರಮಾಣಪತ್ರವು ಐದು ವರ್ಷದ್ದಾಗಿದ್ದು, ಪರಿಶಿಷ್ಟ ಜಾತಿ/ವರ್ಗದ ಪ್ರಮಾಣಪತ್ರವು ಶಾಶ್ವತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನೀವು ಹಿಂದುಳಿದ ವರ್ಗಕ್ಕೆ ಸೇರಿದ್ದರೆ ಮತ್ತೊಮ್ಮೆ ಸಿಂಧುತ್ವ ಪ್ರಮಾಣಪತ್ರವನ್ನು ಕ್ರೀಮಿ ಲೇಯರ್ ದೃಷ್ಟಿಯಿಂದ ಮಾಡಿಸುವುದು ಆವಶ್ಯಕ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ಯನ್ನು ನೋಡಬಹುದು.
***
20-01-2018.
 ಹೆರಿಗೆ ರಜೆಯ ಮೇಲಿರುವ ನಾನು ಸರ್ಕಾರಿ ನೌಕರಳಾಗಿದ್ದು, 2018ರ ಜನವರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ. ಆದರೆ ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ. ಆದ್ದರಿಂದ ನಾನು ಒಂದೂವರೆ ವರ್ಷಗಳ ಕಾಲ ವೇತನರಜೆ ಸಲ್ಲಿಸಲು ಬಯಸಿದ್ದೇನೆ. ಕೆೆಸಿಎಸ್​ಆರ್​ನಲ್ಲಿ ಈ ರೀತಿ ರಜೆ ಹಾಕಲು ಅವಕಾಶವಿದೆಯೆ ಅಥವಾ ಬೇರೆ ಮಾರ್ಗವಿದೆಯೆ?
| ಮನಸ್ವಿನಿ ಉಡುಪಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ಉಪನಿಯಮ 4(ಎ)ರ ಅಡಿಯಲ್ಲಿ ಹೆರಿಗೆ ರಜೆ ನಂತರ 60 ದಿನಗಳವರೆಗೆ ವೈದ್ಯಕೀಯ ಪ್ರಮಾಣ ಪತ್ರವಿಲ್ಲದೆ ರಜೆ ಮಂಜೂರು ಮಾಡಿಸಿಕೊಳ್ಳಬಹುದು. ಉಪನಿಯಮ 4(ಬಿ)ಯಡಿಯಲ್ಲಿ ಮಗುವಿಗೆ ತಾಯಿಯ ವೈಯಕ್ತಿಕ ಗಮನದ ಮತ್ತು ಮಗುವಿನ ಹತ್ತಿರ ತಾಯಿ ಇರುವುದು ತುಂಬ ಅವಶ್ಯವೆಂದು ಅಧಿಕೃತ ವೈದ್ಯಾಧಿಕಾರಿ ನೀಡುವ ಪ್ರಮಾಣಪತ್ರದ ಮೇಲೆ ರಜೆ ಮಂಜೂರು ಮಾಡಿಸಿಕೊಳ್ಳಬಹುದು. ಹೀಗಾಗಿ ನೀವು ಮಗುವಿನ ಆರೈಕೆಯ ದೃಷ್ಟಿಯಿಂದ ವೈದ್ಯಕೀಯ ಪ್ರಮಾಣಪತ್ರದ ಆಧಾರದ ಮೇಲೆ ವೇತನರಹಿತ ರಜೆ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
***
 19-01-2018.
ನಾನು 24.3.2003ರಲ್ಲಿ ಸಶಸ್ತ್ರ ಪೊಲೀಸ್​ಪೇದೆಯಾಗಿ ಸೇರಿ 2007ರಲ್ಲಿ ಸಿವಿಲ್ ಪೊಲೀಸ್ ಆಗಿ ಆಯ್ಕೆಯಾದೆ. ತದನಂತರ 2016ರಲ್ಲಿ ಕೆಪಿಎಸ್​ಸಿ ಮೂಲಕ ಎಫ್​ಡಿಎ ಹುದ್ದೆಗೆ ನೇಮಕಗೊಂಡು 2017ರಲ್ಲಿ ಪಿಎಸ್​ಐ ಆಗಿ ಆಯ್ಕೆಯಾಗಿದ್ದೇನೆ. ಆದರೆ ಮೈಸೂರು ಮಹಾನಗರ ಪಾಲಿಕೆಯು ಸ್ಥಳೀಯ ಸಂಸ್ಥೆಯಾಗಿದ್ದು ಸದರಿಯವರು ನನ್ನನ್ನು ಕೆಸಿಎಸ್​ಆರ್ 252ಬಿ ಪ್ರಕಾರ ಬಿಡುಗಡೆಗೊಳಿಸಿರುವುದಿಲ್ಲ. ಆದ್ದರಿಂದ ನನ್ನ ಹಿಂದಿನ ಸೇವೆಯು ನಿಯಮ 224ಬಿ ಪ್ರಕಾರ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಬಹುದೆ?.
| ಎನ್.ಕೆ. ಹರೀಶ ಮೈಸೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 224ಬಿ ಪ್ರಕಾರ ನೀವು ಪಿಂಚಣಿ ಸೌಲಭ್ಯಕ್ಕೆ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಬೇಕಾದರೆ ನಿಯಮ 252 ಬಿ ಪ್ರಕಾರ ರಾಜೀನಾಮೆ ನೀಡಿ ಬೇರೊಂದು ಹುದ್ದೆಗೆ ಕರ್ತವ್ಯಕ್ಕೆ ಹಾಜರಾದರೆ ಪರಿಗಣಿಸಲಾಗುತ್ತದೆ. ಏತನ್ಮಧ್ಯೆ ನೀವು 2016ರಿಂದ 2017ರವರೆಗೆ ಸ್ಥಳೀಯ ಸಂಸ್ಥೆಯಲ್ಲಿ ಸಲ್ಲಿಸಿದ ಸೇವೆಯನ್ನು ಪಿಂಚಣಿ ಸೌಲಭ್ಯಕ್ಕೆ ಪರಿಗಣಿಸಲು ಬರುವುದಿಲ್ಲ.
***
 18-01-2018.
ನಾನು 2017ರ ಮೇ ತಿಂಗಳಿನಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಸರ್ಕಾರಿ ಸೇವೆಗೆ ಸೇರಿದ್ದೇನೆ. ನನಗೆ ಪ್ರತಿ ತಿಂಗಳು ಎಷ್ಟು ದಿವಸ ಸಾಂರ್ದಭಿಕ ರಜೆ ಲಭಿಸುತ್ತದೆ? ಈ ರೀತಿ ಲಭ್ಯವಾದ ಸಾಂರ್ದಭಿಕ ರಜೆ ಆಯಾ ವರ್ಷದ ಡಿಸೆಂಬರ್​ನಲ್ಲಿ ನಷ್ಟವಾಗುತ್ತದೆಯೆ? ಒಮ್ಮೆ ಎಷ್ಟು ಸಾಂರ್ದಭಿಕ ರಜೆಯನ್ನು ಪಡೆಯಬಹುದು?
| ಜಗದೀಶ್ ಎಂ ಕೋಲಾರ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ಬಿ ಮೇರೆಗೆ ಸರ್ಕಾರಿ ಸೇವೆಗೆ ಸೇರಿದ ಮೊದಲ ವರ್ಷದಲ್ಲಿ ತಿಂಗಳಿಗೆ ಒಂದು ದಿನದಂತೆ ಸಾಂರ್ದಭಿಕ ರಜೆ ಲಭಿಸುತ್ತದೆ. ಈ ರೀತಿಯಾಗಿ ರಜೆ ಖಾತೆಯಲ್ಲಿ ಸೇರ್ಪಡೆಯಾದ ರಜೆಯು ಮುಂದಿನ ವರ್ಷದ ಡಿಸೆಂಬರ್​ವರೆಗೂ ನಷ್ಟವಾಗದೆ ಉಳಿಯುತ್ತದೆ. ಒಂದು ವರ್ಷವಾದ ಮೇಲೆ ಕ್ಯಾಲೆಂಡರ್ ವರ್ಷದಲ್ಲಿ ನೀಡುವ 15 ದಿನಗಳ ಅನುಪಾತದಲ್ಲಿ ಲೆಕ್ಕ ಹಾಕಿ ಖಾತೆಗೆ ಸೇರಿಸಲಾಗುತ್ತದೆ. ಒಮ್ಮೆಗೆ ಒಟ್ಟು ಏಳು ದಿನಗಳ ಕಾಲ ಸಾಂರ್ದಭಿಕ ರಜೆಯನ್ನು ವೈಯಕ್ತಿಕ ಅಥವಾ ಇನ್ನಿತರ ಕಾರಣಗಳ ನಿಮಿತ್ತ ಪಡೆಯಬಹುದಾಗಿದೆ. ಈ ಸಾಂರ್ದಭಿಕ ರಜೆಗಳು ಸಾರ್ವತ್ರಿಕ ರಜೆಗಳಾದ ಭಾನುವಾರ, ಇನ್ನಿತರ ಹಬ್ಬ ಹರಿದಿನಗಳ ರಜೆ ಒಳಗೊಳ್ಳುವುದಿಲ್ಲ.
***
 17-01-2018
ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ ಅಕೌಂಟೆಂಟ್ ಆಗಿ 22 ವರ್ಷ ಸೇವೆ ಸಲ್ಲಿಸಿರುವ
ನನಗೆ 55 ವರ್ಷ. ನಾನೀಗ ಸ್ವಯಂನಿವೃತ್ತಿ ಪಡೆಯಬಹುದೆ? ಸ್ವಯಂನಿವೃತ್ತಿ
ಹೊಂದಲು ಗರಿಷ್ಠ ಎಷ್ಟು ವರ್ಷ ಸೇವೆ ಸಲ್ಲಿಸಬೇಕು? ಸೂಕ್ತ ಮಾಹಿತಿ ನೀಡಿ.
| ಕೆ.ಆರ್. ರಾಮಕೃಷ್ಣ ಅಡಿಗ ಮಂಗಳೂರು
ಕರ್ನಾಟಕ ಸಹಕಾರಿ ಸಂಘಗಳ ನಿಯಮಗಳು 1960ರ ನಿಯಮ 18 (4)(ಜಿಜಿ)ರ ಮೇರೆಗೆ ಸಹಕಾರಿ ಬ್ಯಾಂಕಿನ ಯಾವುದೇ ಉದ್ಯೋಗಿಯು ಸ್ವಯಂನಿವೃತ್ತಿ ತೆಗೆದುಕೊಳ್ಳಲು ಬಯಸಿದರೆ ಕನಿಷ್ಠ 15 ವರ್ಷ ತೃಪ್ತಿದಾಯಕ ಸೇವೆ ಸಲ್ಲಿಸಿರಬೇಕು ಅಥವಾ 50 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು ಎನ್ನಲಾಗಿದೆ. ಆದುದರಿಂದ ನೀವು ಸ್ವಯಂನಿವೃತ್ತಿ ಪಡೆಯಲು ಅನುಮತಿ ಕೋರಿ ಮೂರು ತಿಂಗಳ ಮುಂಚಿತವಾಗಿ ಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ‘ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಮತ್ತು ನಿಯಮಗಳು 1961’ ಪುಸ್ತಕವನ್ನು ನೋಡಬಹುದಾಗಿದೆ.
***
 16-01-2018.
ಸರ್ಕಾರಿ ಸೇವೆಯಲ್ಲಿ ಸುಮಾರು 30 ವರ್ಷ ಸೇವೆ ಸಲ್ಲಿಸಿರುವ ನನಗೆ 54 ವರ್ಷ. ಇತ್ತೀಚೆಗೆ ಸರ್ಕಾರವು ಎಲ್ಲಾ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವೆಂದು ಆದೇಶಿಸಿದೆ. ಆದ್ದರಿಂದ 50 ವರ್ಷಕ್ಕಿಂತ ಹೆಚ್ಚಾಗಿರುವುದರಿಂದ ಹಾಗೂ ನಾನು 1989ರಲ್ಲಿ ಸರ್ಕಾರಿ ಸೇವೆಗೆ ಸೇರಿರುವುದರಿಂದ ಈ ಪರೀಕ್ಷೆ ಕಡ್ಡಾಯವೆ? ಈ ಪರೀಕ್ಷೆಯಲ್ಲಿ ಎಷ್ಟು ಅಂಕ ಪಡೆಯಬೇಕು?
| ವಿಠಲ್ ರಾವ್ ಶಿವಮೊಗ್ಗ.
ಕರ್ನಾಟಕ ಸರ್ಕಾರಿ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ನಿಯಮ 3(3)ರ ಮೇರೆಗೆ ದಿನಾಂಕ 22.3.2012ರಲ್ಲಿ 50 ವರ್ಷ ದಾಟಿದ ಸರ್ಕಾರಿ ನೌಕರರಿಗೆ ವಿನಾಯಿತಿ ನೀಡಲಾಗಿದೆ. ಆದರೆ ನಿಮಗೆ ಆಗ ಈ ವಯಸ್ಸು ದಾಟದೆ ಇರುವುದರಿಂದ ಪ್ರಸ್ತುತ ಕಡ್ಡಾಯವಾಗಿರುತ್ತದೆ. ನೀವು ಈ ಪರೀಕ್ಷೆಯಲ್ಲಿ ನಿಯಮ 3(1)ರ ಮೇರೆಗೆ ಶೇ. 35 ಅಂಕಗಳನ್ನು ಪಡೆದು ತೇರ್ಗಡೆಯಾದರೆ ಸಾಕು. ಅಂದರೆ 80 ಅಂಕಗಳಿಗೆ 28 ಅಂಕಗಳನ್ನು ಗಳಿಸಿದರೆ ಸಾಕು. ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಕೈಪಿಡಿ’ ಪುಸ್ತಕವನ್ನು ನೋಡಬಹುದಾಗಿದೆ.
***
 15-01-2018.
ನಾನು ಸ್ಥಳೀಯ ಸಂಸ್ಥೆಯಲ್ಲಿ ‘ಸಿ’ ಗುಂಪಿನ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ. 2013ರಲ್ಲಿ ಕೌಟುಂಬಿಕ ಕಾರಣಕ್ಕಾಗಿ ಎರಡು ತಿಂಗಳು ಗೈರುಹಾಜರಾಗಿ ಸೇವೆಗೆ ಹೋಗಲು ಅನುಮತಿ ಕೋರಿದಾಗ ನಮ್ಮ ಮೇಲಧಿಕಾರಿಗಳು ಸಕ್ಷಮ ಅಧಿಕಾರಿಯಿಂದ ಅನುಮತಿ ದೊರೆಯದ ಹೊರತು ಕರ್ತವ್ಯಕ್ಕೆ ವರದಿ ಮಾಡಿಸಿಕೊಳ್ಳುವುದಿಲ್ಲ ಎಂದರು. ಸುಮಾರು ಎಂಟು ತಿಂಗಳ ನಂತರ ಕರ್ತವ್ಯಕ್ಕೆ ಸೇರಿಸಿಕೊಂಡು ಎರಡು ವರ್ಷಗಳ ನಂತರ ಶಿಸ್ತುಪ್ರಾಧಿಕಾರಿ ಇಲಾಖಾ ವಿಚಾರಣೆ ಕುರಿತು ನೋಟಿಸ್ ಜಾರಿ ಮಾಡಿ ಲಿಖಿತವಾಗಿ ಸಲ್ಲಿಸಿದ ದಾಖಲೆಗಳನ್ನು ಪರಿಗಣಿಸದೆ ಸೇವೆಯಿಂದ ವಜಾಗೊಳಿಸಿದ್ದಾರೆ. ಇದು ಸರಿಯಾದ ಕ್ರಮವೆ?
| ಪರಶುರಾಮ್ ಸಿಕ್ಕಲಾಗರ್ ಕೊಪ್ಪಳ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 108ರ ಮೇರೆಗೆ 120 ದಿನಗಳಿಗಿಂತ ಹೆಚ್ಚು ಕಾಲ ಅನಧಿಕೃತವಾಗಿ ಗೈರು ಹಾಜರಾದರೆ ಸೇವೆಯಿಂದ ವಜಾಗೊಳಿಸಬಹುದು, ಕಡ್ಡಾಯ ನಿವೃತ್ತಿ ಮಾಡಬಹುದು. ಈ ರೀತಿ ದಂಡನೆ ವಿಧಿಸುವ ಮೊದಲು ಸರ್ಕಾರಿ ಸೇವಾ ನಿಯಮಾವಳಿ ರೀತ್ಯ ಇಲಾಖಾ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬಹುದು. ನಿಮ್ಮ ಮೇಲಧಿಕಾರಿಯ ಮಾತು ಹಾಗೂ ಈ ರೀತಿಯ ವಜಾ ಸರಿಯಲ್ಲ. ನೀವು ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಕೋರ್ಟ್ ಮೊರೆ ಹೋಗಬಹುದು.
***
 14-01-2018.
ನಾನು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ 1981ರಿಂದ ಕರ್ತವ್ಯ ನಿರ್ವಹಿಸುತ್ತಿದ್ದು, 2006ರಲ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಪದೋನ್ನತಿ ಪಡೆದಿದ್ದೇನೆ. ನನಗೆ ಒಂದು ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗಿದ್ದು, ಅದೇ ವೇತನ ಶ್ರೇಣಿಯಲ್ಲಿರುವುದರಿಂದ ನನಗೆ 2015 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದೆ?
| ಪ್ರೇಮಾ ಗೋ. ಭಟ್ಟ, ಅಳವಳ್ಳಿ, ಕುಮಟಾ.
ದಿನಾಂಕ 9-5-2002ರ ಸರ್ಕಾರಿ ಆದೇಶ ಸಂಖ್ಯೆ: ಎಫ್​ಡಿ 13 ಎಸ್​ಆರ್​ಪಿ 2002 ರಂತೆ ಸೇವೆಯಲ್ಲಿ ಕನಿಷ್ಠ ಒಂದು ಪದೋನ್ನತಿ ಪಡೆದ ಸರ್ಕಾರಿ ನೌಕರರಿಗೆ ಇಪ್ಪತ್ತು ವರ್ಷಗಳ ಸೇವಾವಧಿಗೆ ಹೆಚ್ಚುವರಿ ವೇತನಬಡ್ತಿ ಲಭ್ಯವಾಗುವುದಿಲ್ಲ. ಅದೇ ರೀತಿಯಾಗಿ ದಿನಾಂಕ 14-6-2012ರ ಸರ್ಕಾರಿ ಆದೇಶ ಸಂಖ್ಯೆ: ಎಫ್​ಡಿ 12 ಎಸ್​ಆರ್​ಎಸ್2012ರ ಮೇರೆಗೆ ಈ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.
***
 13.01.2018.
ನಮ್ಮ ಶಾಲೆಯಲ್ಲಿ ಜನವರಿ 2018ಕ್ಕೆ ಮುಖ್ಯೋಪಾಧ್ಯಾಯರೊಬ್ಬರು ನಿವೃತ್ತರಾಗುತ್ತಾರೆ. ನಂತರ ಶಾಲೆಯ ಮುಖ್ಯೋಪಾಧ್ಯಾಯರ ಪ್ರಭಾರೆಯನ್ನು ಆ ಶಾಲೆಯಲ್ಲಿ ಹೆಚ್ಚು ಸೇವೆ ಸಲ್ಲಿಸಿದವರು ಅಥವಾ ಜಿಲ್ಲಾ ಸೇವಾ ಹಿರಿತನದಲ್ಲಿ ಹಿರಿಯ ಶಿಕ್ಷಕರು ವಹಿಸಿಕೊಳ್ಳಬೇಕು. ಪರಿಹಾರ ಸೂಚಿಸಿ.
| ಕೆ.ಜೆ. ರಾಜೇಶ್ ಧಾರವಾಡ.
ದಿನಾಂಕ 6-3-2017ರ ಸರ್ಕಾರದ ಸುತ್ತೋಲೆ ಸಂಖ್ಯೆ ಇಡಿ124ಎಲ್​ಬಿಪಿ2016ರಲ್ಲಿ ಈ ಹಿಂದೆ ಶಾಲೆಯ ಹಿರಿಯ ಶಿಕ್ಷಕರು ಪ್ರಭಾರ ವಹಿಸಿಕೊಳ್ಳುವ ಬಗ್ಗೆ ಹೊರಡಿಸಿದ್ದ ದಿನಾಂಕ 25-5-2016ರ ಅಥವಾ ಸಮಸಂಖ್ಯೆಯ ಸುತ್ತೋಲೆಯನ್ನು ಹಿಂಪಡೆಯಲಾಗಿದೆ. ಆದುದರಿಂದ ಪ್ರಸ್ತುತ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 32ರ ಮೇರೆಗೆ ಜಿಲ್ಲೆಯ ಜ್ಯೇಷ್ಠತಾ ಘಟಕದಲ್ಲಿ ಯಾವುದೇ ವಿಷಯದ ಶಿಕ್ಷಕರು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರೆ ಅಂತಹ ಶಿಕ್ಷಕರು ಮುಖ್ಯೋಪಾಧ್ಯಾಯರ ಪ್ರಭಾರವನ್ನು ವಹಿಸಿಕೊಳ್ಳಬಹುದು. ಆದುದರಿಂದ ನಿಮ್ಮ ಶಾಲೆಯಲ್ಲಿ ಹಿರಿಯ ಶಿಕ್ಷಕರು ಮಾತ್ರ ಪ್ರಭಾರ ವಹಿಸಿಕೊಳ್ಳಲು ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕರು ಆದೇಶ ನೀಡಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಿ.
***
12-01-2018.
ನಾನು 36ನೇ ವಯಸ್ಸಿಗೆ ಕೆಲಸಕ್ಕೆ ಸೇರಿ, 24 ವರ್ಷ ಸೇವೆ ಸಲ್ಲಿಸಿ, 2016ರ ಜುಲೈ 31ರಂದು ವಯೋನಿವೃತ್ತನಾಗಿದ್ದೇನೆ. ಸರ್ಕಾರಿ ಸೇವಾ ನಿಯಮಾವಳಿ ರೀತ್ಯ 30 ವರ್ಷ ಕಳೆದ ನಂತರ ಕೆಲಸಕ್ಕೆ ಸೇರಿದ್ದರೆ, ಪಿಂಚಣಿಗಾಗಿ ನಾಲ್ಕು ವರ್ಷಗಳ ಅರ್ಹತಾದಾಯಕ ಸೇವೆಯನ್ನು ವಿಶೇಷ ಸೇರ್ಪಡೆಯಾಗಿ ಪರಿಗಣಿಸಬಹುದೆ? ಹಾಗಿದ್ದಲ್ಲಿ ಯಾರಿಗೆ ಮನವಿ ಸಲ್ಲಿಸಬೇಕು?
| ಡಿ. ಶಾಂತ ನೆಲಮಂಗಲ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247ಎ ರೀತ್ಯ 30 ವರ್ಷ ತುಂಬಿದ ತರುವಾಯ ನೇರ ನೇಮಕಾತಿ ಆಗುವ ವ್ಯಕ್ತಿಗಳು ನಿವೃತ್ತಿ ಹೊಂದುವ ಸಂದರ್ಭದಲ್ಲಿ ಅವರ ಅರ್ಹತಾದಾಯಕ ಸೇವೆಗೆ ಎರಡು ವರ್ಷಗಳಿಗೆ ಒಳಪಟ್ಟು ಸೇರಿಸಬಹುದಾಗಿದೆ. ಈ ಸೌಲಭ್ಯವು ದಿನಾಂಕ 15-2-2012ರ ಸರ್ಕಾರದ ತಿದ್ದುಪಡಿ ಅಧಿಸೂಚನೆ ಸಂಖ್ಯೆ ಎಫ್​ಡಿ2004ಎಸ್​ಆರ್​ಎ2010ರ ಮೇರೆಗೆ ದಿನಾಂಕ 15-2-2012ರ ನಂತರ ನಿವೃತ್ತರಾಗುವ ನೌಕರರಿಗೆ ನೀಡಲಾಗುತ್ತದೆ. 
***
 11.01.2018.
ನಾನು ತಂದೆಯ ಮರಣದ ಅನುಕಂಪದ ಆಧಾರದ ಮೇಲೆ 1985ರಲ್ಲಿ ಕಾಯಂ ಸರ್ಕಾರಿ ನೌಕರಳಾಗಿ ಜವಾನ ಹುದ್ದೆ ಪಡೆದಿದ್ದೇನೆ. ಆದರೆ ನಾನು ಆ ಸಮಯದಲ್ಲಿ ದೇವದಾಸಿ ಆಗಿದ್ದು ಮತ್ತು ನನಗೆ ಬೇರೆ ಬೇರೆ ಪುರುಷರಿಂದ ಜನಿಸಿದ ಎರಡು ಗಂಡು ಮಕ್ಕಳೂ ಇದ್ದರು. ಆದರೆ ನನ್ನ ಅಣ್ಣಂದಿರು ನನ್ನನ್ನು ‘ಕುಮಾರಿ’ ಎಂದು ಜವಾನ ಹುದ್ದೆಗೆ ಸೇರಿಸಿದ್ದರು. ಈ ರೀತಿಯಾಗಿ ಹುದ್ದೆ ಸೇರಿದ್ದು ತಪ್ಪು ಎಂದು ಕೆಲವರು ಹೇಳುತ್ತಿದ್ದಾರೆ. ಈ ರೀತಿ ಹುದ್ದೆ ಪಡೆದಿದ್ದು ತಪ್ಪೇ? ಇದಕ್ಕೆ ನಾನು ಏನು ಮಾಡಬೇಕು?
| ಸುಶೀಲಾ ರಾಯಚೂರು.
ನೀವು ದೇವದಾಸಿ ಪದ್ಧತಿಯಲ್ಲಿ ಬೇರೆ ಬೇರೆ ಪುರುಷರಿಂದ ಎರಡು ಗಂಡು ಮಕ್ಕಳನ್ನು ಪಡೆದಿರುತ್ತೀರಿ. ನೀವು ಈಗಾಗಲೇ ಅನುಕಂಪದ ಮೇಲೆ ನೇಮಕಾತಿ ಹೊಂದಿರುವುದು ಸ್ವಾಭಾವಿಕ ನ್ಯಾಯದಡಿಯಲ್ಲಿ ಸರಿಯಾಗಿದೆ. ಸುಮಾರು 32 ವರ್ಷಗಳ ಸೇವೆ ಗತಿಸಿರುವುದರಿಂದ ಈಗಾಗಲೇ ಇದು ಸ್ವಾಭಾವಿಕ ನ್ಯಾಯದಡಿಯಲ್ಲಿ ಕ್ರಮಬದ್ಧವಾಗಿದೆ, ಹಾಗೂ ನಿಯಮಾವಳಿ ರೀತ್ಯ ಸರಿಯಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಿ.
***
 10.01.2018.
ನಾನು ಅಂಗವಿಕಲ ಮೀಸಲಾತಿ ಅಡಿಯಲ್ಲಿ ಪ್ರೌಢಶಾಲಾ ಸಹಶಿಕ್ಷಕಿಯಾಗಿ 1997ರಲ್ಲಿ ಆಯ್ಕೆಯಾಗಿ ಕೆಲಸ ಮಾಡುತ್ತಿದ್ದೇನೆ. ಯಾವುದೋ ಮೂಗರ್ಜಿಯ ಹಿನ್ನೆಲೆಯಲ್ಲಿ ಹೊಸದಾಗಿ ಅಂಗವಿಕಲ ಪ್ರಮಾಣಪತ್ರ ನೀಡಲು ವೈದ್ಯಕೀಯ ಮಂಡಳಿಗೆ ಹಾಜರಾಗಲು ಇಲಾಖೆಯವರು ಹೇಳುತ್ತಿದ್ದಾರೆ. ಇದು ನಿಯಮಾವಳಿ ರೀತ್ಯ ಸರಿಯೆ?
| ಬಿ. ಪದ್ಮಾವತಿ ಬೆಂಗಳೂರು.
13-8-1995ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಎಆರ್​ಸೇಸ್ಥಅ94ರಲ್ಲಿ ನೇಮಕಾತಿ ಪ್ರಾಧಿಕಾರಿಯವರು ಅಂಗವಿಕಲ ಹುದ್ದೆಗಳನ್ನು ತುಂಬಲು ಅರ್ಜಿಗಳನ್ನು ಆಹ್ವಾನಿಸಿದ್ದಾಗ ಅಧಿಕೃತ ನಮೂನೆಯಲ್ಲಿ, ಅಂಗವಿಕಲತೆ ಬಗ್ಗೆ ಸಂಬಂಧಪಟ್ಟ ಜಿಲ್ಲಾ/ತಾಲ್ಲೂಕು ಮಟ್ಟದ ವೈದ್ಯಾಧಿಕಾರಿ ನೀಡಿದ ಪ್ರಮಾಣಪತ್ರವನ್ನು ಅರ್ಜಿಯೊಡನೆ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಈ ರೀತಿ ಸಲ್ಲಿಸಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಮೂಲ ವೈದ್ಯಕೀಯ ಪ್ರಮಾಣಪತ್ರಗಳನ್ನು ನೇಮಕಾತಿ ಪ್ರಾಧಿಕಾರಕ್ಕೆ ನೀಡಬೇಕು. ಒಮ್ಮೆ ವೈದ್ಯಕೀಯ ಪ್ರಮಾಣಪತ್ರ ನೀಡಿದಲ್ಲಿ ಅದು ಸದಾ ಚಾಲ್ತಿಯಲ್ಲಿರುತ್ತದೆ. ಸರ್ಕಾರಿ ನೌಕರರ ಮೇಲೆ ಬರುವ ಅನಾಮಧೇಯ ದೂರು ಅರ್ಜಿಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಬಾರದೆಂದು ಸವೋಚ್ಚ ನ್ಯಾಯಾಲಯ ಸೂಚಿಸಿದೆ.
***
 09.01.2018.
ನಾನು ಸೇವೆಗೆ ಸೇರುವ ಮೊದಲೇ ಒಂದು ಹೆಣ್ಣುಮಗುವನ್ನು ಪಡೆದಿದ್ದು, 2007ರಲ್ಲಿ ಸಹಶಿಕ್ಷಕಿಯಾಗಿ ಸೇವೆಗೆ ಸೇರಿದ್ದೇನೆ. 2010ರಲ್ಲಿ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದು, ಒಂದು ಬಾರಿ ಮಾತ್ರ ಹೆರಿಗೆ ರಜೆ ಪಡೆದಿರುತ್ತೇನೆ. ಮೂರನೇ ಮಗುವಿಗೆ ಈ ಹೆರಿಗೆ ರಜೆ ಪಡೆಯಲು ಅರ್ಹಳೆ? ಪ್ರಸೂತಿ ರಜೆಯನ್ನು ಬಿಟ್ಟು ಬೇರೆ ರಜೆ ಪಡೆಯಬಹುದೆ?
| ರಶ್ಮಿ ಹಿರಿಯೂರು, ಚಿತ್ರದುರ್ಗ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ರೀತ್ಯ ಎರಡು ಜೀವಂತ ಮಕ್ಕಳು ಇರುವವರೆಗೆ ಈ ಪ್ರಸೂತಿ ರಜೆ ಪಡೆಯಬಹುದು. ಈಗಾಗಲೇ ಸೇವೆಗೆ ಸೇರಿದ ನಂತರ ಒಂದು ಪ್ರಸೂತಿ ರಜೆ ಪಡೆದಿರುವುದರಿಂದ ಹಾಗೂ ಎರಡು ಜೀವಂತ ಮಕ್ಕಳು ಇರುವುದರಿಂದ, ಮೂರನೇ ಮಗುವಿಗೆ ಈ ಹೆರಿಗೆ ರಜೆ ಸೌಲಭ್ಯಕ್ಕೆ ನೀವು ಅರ್ಹರಾಗಿರುವುದಿಲ್ಲ. ಆದರೆ ನಿಮ್ಮ ಲೆಕ್ಕದಲ್ಲಿರುವ ಗಳಿಕೆ ರಜೆ ಅಥವಾ ಅಸಾಧಾರಣ ರಜೆ, ನಿಯಮ 117ರ ಮೇರೆಗೆ ಗಳಿಸದ ರಜೆಯನ್ನು ಪಡೆಯಬಹುದು.
***
 08.01.2018. 
ನನ್ನ ಪತ್ನಿ ಮಾನ್ಯತೆ ಪಡೆದ ಒಂದು ಸಹಕಾರಿ ಬ್ಯಾಂಕ್​ನಲ್ಲಿ 12 ವರ್ಷ ಸೇವೆ ಸಲ್ಲಿಸಿ 2017ರ ನವೆಂಬರ್ ಹತ್ತರಂದು ಅನಾರೋಗ್ಯದಿಂದ ನಿಧನರಾದರು. ನಮಗೆ ಒಂದು ಗಂಡುಮಗು ಇದೆ. ಬಿ.ಕಾಂ. ಪದವೀಧರನಾಗಿರುವ 47 ವರ್ಷದ ನಾನು 3ಬಿ ಪ್ರವರ್ಗಕ್ಕೆ ಸೇರಿದವನು. ನನಗೆ ಅನುಕಂಪದ ಆಧಾರದ ಮೇಲೆ ಆ ಬ್ಯಾಂಕ್​ನಲ್ಲಿ ಉದ್ಯೋಗ ಸಿಗುತ್ತದೆಯೆ? ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದಾಗ, ನೀವು ವಯಸ್ಸು ದಾಟಿರುವುದರಿಂದ ಯಾವುದೇ ಉದ್ಯೋಗ ನೀಡಲು ಸಾಧ್ಯವಿಲ್ಲ’ ಎಂದಿದ್ದಾರೆ. ಈ ಬಗ್ಗೆ ತಿಳಿಸಿ.
| ವಿನಾಯಕ ಶಿರಸಿ, ಉತ್ತರ ಕನ್ನಡ.
1960 ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿಯ ನಿಯಮ 18(3)ರಡಿಯಲ್ಲಿ (ತಿದ್ದುಪಡಿ ಅಧಿಸೂಚನೆ ಸಂಖ್ಯೆ ಸಿಒ123ಸಿಎಲ್​ಎಂ2016 ದಿನಾಂಕ 29-7-2017) ಸಹಕಾರ ಸಂಘದ / ಬ್ಯಾಂಕಿನಲ್ಲಿ ಮರಣ ಹೊಂದಿದ ಪುರುಷ / ಸ್ತ್ರೀ ಉದ್ಯೋಗಿಗೂ ವಿಧುರ / ವಿಧವೆಯಾದರೆ ಈ ಹುದ್ದೆಯ ನೇಮಕಾತಿಗೆ ಗರಿಷ್ಠ ವಯಸ್ಸು ಮಿತಿಯನ್ನು 10 ವರ್ಷಗಳಷ್ಟು ಸಡಿಲಿಸಲಾಗಿದೆ. ಈ ನಿಯಮದ ಅನುಸಾರ ಸಹಕಾರ ಬ್ಯಾಂಕುಗಳಲ್ಲಿ ನಿಧನ ಹೊಂದಿದರೆ ಅನುಕಂಪದ ಆಧಾರದ ಮೇಲೆ ವಿಧುರನಿಗೆ ನೇಮಕಾತಿಗೆ ಅವಕಾಶ ನೀಡಲು ತಿಳಿಸಲಾಗಿದೆ. 3ಬಿ ಪ್ರವರ್ಗಕ್ಕೆ ಸೇರಿರುವ ನಿಮಗೆ 48 ವರ್ಷದವರೆಗೆ ನೇಮಕಕ್ಕೆ ಅವಕಾಶವಿದೆ.
***
 07.01.2018.
ನನ್ನ ತಂದೆಯವರು ಕೆಎಸ್​ಆರ್​ಟಿಸಿಯಲ್ಲಿ ಕಂಡಕ್ಟರ್ ಆಗಿದ್ದರು. ಅನಾರೋಗ್ಯದಿಂದ ಅವರ ನಿಧನದ ನಂತರ ಅನುಕಂಪದ ಆಧಾರದ ಮೇಲೆ ತಾಯಿಗೆ ಉದ್ಯೋಗ ದೊರಕಿತ್ತು. ಅವರೂ ಅನಾರೋಗ್ಯದಿಂದ ಕರ್ತವ್ಯದಲ್ಲಿರುವಾಗಲೇ ನಿಧನ ಹೊಂದಿದ್ದಾರೆ. ನಾನು ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಸಲ್ಲಿಸಿದಾಗ, ಈಗಾಗಲೇ ನಿಮ್ಮ ತಾಯಿಗೆ ಅನುಕಂಪದ ಮೇಲೆ ನೇಮಕಾತಿ ನೀಡಿರುವುದರಿಂದ ಮತ್ತೆ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿ.
| ಪಿ. ಮನು, ಮೈಸೂರು.
1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ) ನಿಯಮಾವಳಿಯ ನಿಯಮ 3ರ ಮೇರೆಗೆ ನೌಕರರ ಅವಲಂಬಿತರಾದ ಪತಿ/ಪತ್ನಿ/ಮಗ ಮತ್ತು ಅವಿವಾಹಿತ ಮಗಳು ಇದ್ದರೆ ಅನುಕಂಪದ ಮೇರೆಗೆ ಉದ್ಯೋಗ ನೀಡಬಹುದೆಂದು ಸೂಚಿಸುತ್ತದೆ. ನೀವು ಸಂಪೂರ್ಣವಾಗಿ ತಾಯಿಯನ್ನೇ ಅವಲಂಬಿಸುತ್ತಿದ್ದುದರಿಂದ ನಿಮಗೆ ಅನುಕಂಪದ ಮೇರೆಗೆ ಮತ್ತೊಮ್ಮೆ ಉದ್ಯೋಗಾವಕಾಶ ಕೊಡಬೇಕಾದುದು ನ್ಯಾಯ. ನೀವು ಮತ್ತೊಮ್ಮೆ ಕೆಎಸ್​ಆರ್​ಟಿಸಿ ನೇಮಕಾತಿ ಪ್ರಾಧಿಕಾರಕ್ಕೆ ಮನವಿ ಮಾಡಿ ಉದ್ಯೋಗ ಪಡೆಯಬಹುದು ಅಥವಾ ಕಾರ್ವಿುಕ ನ್ಯಾಯಾಲಯಕ್ಕೆ ಹೋಗಬಹುದು.
*** ಸರ್ಕಾರಿ ಕಾರ್ನರ್:
06.01.2018. 
ನಾನು 2008ರಲ್ಲಿ ಬೆಂಗಳೂರು ವಿಭಾಗದಿಂದ ಪ್ರೌಢಶಾಲಾ ಶಿಕ್ಷಕಿಯಾಗಿ ನೇಮಕಾತಿ ಹೊಂದಿದೆ. 2014ರಲ್ಲಿ ಕೋರಿಕೆ ಮೇರೆಗೆ ತುಮಕೂರು ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿದ್ದು, ಜ್ಯೇಷ್ಠತಾ ಪಟ್ಟಿಯಲ್ಲಿ ನೇಮಕಾತಿ ಆದೇಶದ ದಿನಾಂಕದ ಬದಲು ವರ್ಗಾವಣೆಯಾದ ದಿನಾಂಕವನ್ನು ಸೇರಿಸಲಾಗಿದೆ. ಒಂದೇ ವಿಭಾಗದಲ್ಲಿನ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆಯಾಗಿದ್ದರೆ ಸೇವಾಜ್ಯೇಷ್ಠತೆ ಬೇರೆಬೇರೆಯಾಗುತ್ತದೆಯೆ?
| ರತ್ನಾ ಪ್ರಭಾಕರ ಶಿವಮೊಗ್ಗ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು 2007ರ ನಿಯಮ 8(4)ರಂತೆ; ಸ್ವಂತ ಕೋರಿಕೆ ಮೇರೆಗೆ ಒಂದು ಜ್ಯೇಷ್ಠತಾ ಘಟಕದಿಂದ ಮತ್ತೊಂದು ಘಟಕಕ್ಕೆ ವರ್ಗಾವಣೆಯಾದಲ್ಲಿ, ಅಂತಹವರ ಜ್ಯೇಷ್ಠತೆಯನ್ನು ಕರ್ನಾಟಕ ಸರ್ಕಾರಿ ಸೇವಾ (ಜ್ಯೇಷ್ಠತೆ) ನಿಯಮಗಳು 1957ರ ನಿಯಮ 6ರ ಪರಂತುಕದಡಿಯಲ್ಲಿ ವರ್ಗಾವಣೆಯ ದಿನಾಂಕದಂದು ಆ ಸೇವೆಯ ವೃಂದ ಅಥವಾ ಶ್ರೇಣಿ ಹೊಂದಿದ ನೌಕರರ ಕೆಳಗೆ ಅಂಖವರನ್ನು ಇಡತಕ್ಕದ್ದೆಂದು ಸೂಚಿಸಿದೆ. ಆದ್ದರಿಂದ ಒಂದೇ ವಿಭಾಗವಾದರೂ ನೇಮಕಾತಿ ಪ್ರಾಧಿಕಾರ ಬೇರೆ ಬೇರೆಯಾದ್ದರಿಂದ ಜ್ಯೇಷ್ಠತೆ ಲಭ್ಯವಾಗದು.
***
05.01.2018.
ನಾನು ಸರ್ಕಾರಿ ನೌಕರ. ಸವೋಚ್ಚ ನ್ಯಾಯಾಲಯವು ಬಿ.ಕೆ.ಪವಿತ್ರ ಪ್ರಕರಣದ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಂತೆ ನಮ್ಮ ಇಲಾಖೆಯಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ತಯಾರಿಸಬೇಕಾಗಿತ್ತು. ಆದರೆ ಈ ರೀತಿ ಮಾಡದೆ ಜ್ಯೇಷ್ಠತಾ ಪಟ್ಟಿಯಲ್ಲಿ ಅನೇಕ ಲೋಪದೋಷಗಳು ಸಂಭವಿಸಿದ್ದು, ಈ ಬಗ್ಗೆ ಇಲಾಖಾ ಮುಖ್ಯಸ್ಥರಿಗೆ ಮನವಿ ಮತ್ತು ಆಕ್ಷೇಪಣೆ ಸಲ್ಲಿಸಿದ್ದರೂ ಪ್ರಯೋಜನವಾಗುತ್ತಿಲ್ಲ. ಈ ದೋಷಪೂರಿತ ಜ್ಯೇಷ್ಠತಾ ಪಟ್ಟಿಯ ಆಧಾರದ ಮೇಲೆ ಕಿರಿಯವರಿಗೆ ಪದೋನ್ನತಿ ನೀಡಿದರೆ ನಾವು ಯಾವ ಕ್ರಮ ಕೈಗೊಳ್ಳಬೇಕು?
| ಎನ್. ರಮೇಶ್, ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ (ಜ್ಯೇಷ್ಠತಾ) ನಿಯಮಾವಳಿಯ ಮೇರೆಗೆ ಹಾಗೂ ಸರ್ಕಾರವು ಬಿ.ಕೆ. ಪವಿತ್ರ ಪ್ರಕರಣದಲ್ಲಿ ಹೊರಡಿಸಿದ ಆದೇಶದ ಮೇರೆಗೆ ಆಯಾ ಇಲಾಖೆಯ ನೇಮಕಾತಿ ಪ್ರಾಧಿಕಾರಗಳು ಜ್ಯೇಷ್ಠತಾ ಪಟ್ಟಿಯನ್ನು ದಿನಾಂಕ 15-1-2002ರೊಳಗೆ ಸಿದ್ಧಪಡಿಸಿ ಸರ್ವೇಚ್ಚ ನ್ಯಾಯಾ ಲಯಕ್ಕೆ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದೋಷಪೂರಿತ ಜ್ಯೇಷ್ಠತಾ ಪಟ್ಟಿಯಿದ್ದರೆ ಅಂತಹ ಪಟ್ಟಿಯು ಅಂತಿಮವಾದ ನಂತರ ನೀವು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಮೊರೆ ಹೋಗಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಕೃತಿಯನ್ನು ನೋಡಬಹುದು.
***
 04-01-2018.
52 ವರ್ಷದ ನಾನು ಆರೋಗ್ಯ ಇಲಾಖೆಯಲ್ಲಿ ಗ್ರೂಪ್ ಡಿ ನೌಕರ. 2018ರ ಮೇ ತಿಂಗಳಿನಲ್ಲಿ 25 ವರ್ಷಗಳ ಸೇವಾವಧಿ ಪೂರ್ಣವಾಗುತ್ತದೆ. ನಾನೀಗ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಸ್ವಯಂನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನಾನು ಸ್ವಯಂನಿವೃತ್ತಿ ಆದರೆ ಪಿಂಚಣಿಯಮೂಲವೇತನ ಎಷ್ಟಾಗುತ್ತದೆ? (ಈಗ ನನ್ನ ಮೂಲವೇತನ ರೂ. 16,800) ಎಷ್ಟು ಉಪದಾನ ಹಾಗೂ ಕಮ್ಯುಟೇಷನ್ ಲಭ್ಯವಾಗುತ್ತದೆ? ನನಗೆ ಹೆಚ್ಚುವರಿ ಐದು ವರ್ಷಗಳ ಸೇವಾಧಿಕ್ಯವನ್ನು ಪರಿಗಣಿಸುತ್ತಾರೆಯೇ? ದಯವಿಟ್ಟು ತಿಳಿಸಿ.
| ಎಸ್. ಲಕ್ಷ್ಮೀನಾರಾಯಣ ಕೊಳ್ಳೇಗಾಲ.
ಕರ್ನಾಟಕ ಸರ್ಕಾರ ಸೇವಾ ನಿಯಮಾವಳಿಯಂತೆ ನೀವು 50 ವರ್ಷಗಳ ನಂತರ ನಿವೃತ್ತರಾಗುವುದರಿಂದ ಐದು ವರ್ಷಗಳ ಸೇವಾಧಿಕ್ಯವನ್ನು ಅರ್ಹತಾದಾಯಕ ಸೇವೆಗೆ ಸೇರಿಸಲಾಗುವುದಿಲ್ಲ. ನಿಮ್ಮ ಈಗಿನ ಮೂಲ ವೇತನದ ಹಿನ್ನೆಲೆಯಲ್ಲಿ ಪಿಂಚಣಿಯು ರೂ. 6,363ಕ್ಕೆ ನಿಗದಿಯಾಗಲಿದ್ದು ನಿಮಗೆ 2,10,000 ರೂ. ಉಪದಾನ ಕಮ್ಯುಟೇಷನ್, 3,16,332 ರೂ. ಲಭ್ಯವಾಗುತ್ತದೆ.
***
 03.01-2018
ನಾನು 2018ರ ಜುಲೈ 31ರಂದು ನಿವೃತ್ತಿ ಹೊಂದುತ್ತಿದ್ದೇನೆ. ಜುಲೈ ತಿಂಗಳಿನಲ್ಲಿ ನಿವೃತ್ತಿ ಹೊಂದುವ ಕಾರಣದಿಂದ ನನಗೆ ದೊರಕುವ ಸಾಂರ್ದಭಿಕ ರಜೆ, ಗಳಿಕೆ ರಜೆ, ಅರ್ಧವೇತನ ರಜೆಗಳು ಎಷ್ಟು ಎಂಬುದನ್ನು ತಿಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.
| ಎ.ಬಿ. ಮೋಹನ್​ಕುಮಾರ್ ಹಾಸನ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ಬಿ ಪ್ರಕಾರ 15 ದಿನಗಳ ಕಾಲ ಸಾಂರ್ದಭಿಕ ರಜೆ; ನಿಯಮ 112ರ ಪ್ರಕಾರ 15 ದಿನಗಳ ಕಾಲ ಗಳಿಕೆ ರಜೆ; ಎರಡು ದಿನಗಳ ನಿರ್ಬಂಧಿತ ರಜೆ ಹಾಗೂ ಹತ್ತು ದಿನಗಳ ಅರ್ಧವೇತನ ರಜೆಗಳು ನಿಮಗೆ ಲಭ್ಯವಾಗುತ್ತವೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ರಚಿಸಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮ ಕೃತಿಯನ್ನು ನೋಡಬಹುದು.
***
 02.01.2018.
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು 2006ರಲ್ಲಿ ಇಲಾಖಾ ಅನುಮತಿ ಪಡೆದು, 273 ದಿನಗಳ ಕಾಲ ಬಿಎಡ್ ಶಿಕ್ಷಣವನ್ನು ಪಡೆದಿದ್ದೇನೆ. ನನ್ನ ಈ ಅವಧಿಯನ್ನು ಕರ್ತವ್ಯವಲ್ಲದ (ಈಜಿಛಿಠ ್ಞ್ಞ ಅವಧಿಯೆಂದು ಪರಿಗಣಿಸಿದ್ದು, ನನ್ನ ವಾರ್ಷಿಕ ವೇತನ ಬಡ್ತಿಯನ್ನು ಮುಂದೂಡಲಾಗಿದೆ. ಇದು ಸರಿಯೆ?
| ಕೆ.ಸಿ. ವಸಂತಕುಮಾರ ಶಿಕಾರಿಪುರ, ಶಿವಮೊಗ್ಗ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 55ಎ ಪ್ರಕಾರ ಕರ್ತವ್ಯವಲ್ಲದ ಅವಧಿಯನ್ನು (ಛಜಿಛಿಠಟ್ಞ) ವಾರ್ಷಿಕ ವೇತನ ಬಡ್ತಿಗೆ ಪರಿಗಣಿಸಬಾರದೆಂದು ಸೂಚಿಸಲಾಗಿದೆ. ಆದ್ದರಿಂದ ನಿಮ್ಮ ವೇತನ ಬಡ್ತಿಯನ್ನು ನಿಯಮ 51ರ ಮೇರೆಗೆ ಮುಂದೂಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇದೇ ಲೇಖಕರು ರಚಿಸಿರುವ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ಓದಿ.
***
 01-01-2018.
ನಾನು 1988ರಿಂದ ದಿನಗೂಲಿ ನೌಕರಿಗೆ ಸೇರಿದ್ದೇನೆ. ನಮಗೆ ದಿನಗೂಲಿ ಕ್ಷೇಮಾಭಿವೃದ್ಧಿ ಅಡಿಯಲ್ಲಿ ವೇತನ ಭತ್ಯೆಗಳನ್ನು ನೀಡಲಾಗುತ್ತಿದೆ. ಗಿರಿಧಾಮದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ವರ್ಗದ ನೌಕರರಿಗೂ ತಿಂಗಳಿಗೆ 300 ರೂ.ಗಳನ್ನು ಗಿರಿತಾಣಭತ್ಯೆ ನೀಡಲಾಗುತ್ತಿದೆ. ಆದರೆ ನಮಗೆ ಈ ಸೌಲಭ್ಯ ನೀಡುತ್ತಿಲ್ಲ. ಆದ್ದರಿಂದ ನಮಗೆ ಈ ಗಿರಿತಾಣ ಭತ್ಯೆ ಅನ್ವಯಿಸುತ್ತದೆಯೆ?
| ಎಸ್. ದೇವರಾಜ್ ಚಿಕ್ಕಬಳ್ಳಾಪುರ.
ದಿನಾಂಕ 14.6.2012ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 12 ಎಸ್​ಆರ್​ಪಿ 2012 (4)ರ ಮೇರೆಗೆ ರಾಜ್ಯ ಸರ್ಕಾರಿ ನೌಕರರಿಗೆ 1.4.2012 ರಿಂದ ಜಾರಿಗೆ ಬರುವಂತೆ ಗಿರಿತಾಣ ಭತ್ಯೆಯನ್ನು ನೀಡಲಾಗುತ್ತಿದೆ. ಆದರೆ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮದಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೀವು ಖಾಯಂ ನೌಕರರಾಗಿರದ ಕಾರಣದಿಂದ ನಿಮಗೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಅನ್ವಯವಾಗುವುದಿಲ್ಲ. ಆದುದರಿಂದ ಈ ಗಿರಿತಾಣ ಭತ್ಯೆಯನ್ನು ನಿಮಗೆ ನೀಡಲಾಗುವುದಿಲ್ಲ .
***