ಫೆಬ್ರವರಿ

20-02-18.
ನನ್ನ ಪತ್ನಿ ನ್ಯಾಯಾಂಗ ಇಲಾಖೆಯಲ್ಲಿ ಶಿರಸ್ತೇದಾರರಾಗಿ ಕೆಲಸ ನಿರ್ವಹಿಸುತ್ತಿದ್ದು, ಸೇವೆಯಲ್ಲಿದ್ದಾಗಲೇ ನಿಧನರಾದರು. ನನ್ನ ಮಗ, ಬಿ.ಕಾಂ. ಅಂತಿಮ ವರ್ಷದಲ್ಲಿ ಅನುತ್ತೀರ್ಣರಾಗಿರುವುದರಿಂದ ಅನುಕಂಪ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದೆವು. ನ್ಯಾಯಾಂಗ ಇಲಾಖೆ ಗ್ರೂಪ್ ಡಿ ನೌಕರ ನೀಡಿದ್ದಾರೆ. ದ್ವಿತೀಯ ದರ್ಜೆ ಹುದ್ದೆ ನೀಡಲು ಸಾಧ್ಯವೆ? | 
ಎಂ. ಬಸಪ್ಪ ಕೆ.ಜಿ.ಎಫ್, ಕೋಲಾರ.
ನಿಮ್ಮ ಪುತ್ರನು ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರುವುದರಿಂದ ಕರ್ನಾಟಕ ಸರ್ಕಾರಿ ಸೇವಾ ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಗಳು 1996 ರ ನಿಯಮ 6ರ ಮೇರೆಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯನ್ನೇ ನೀಡಬೇಕಾಗುತ್ತದೆ. ಅಲ್ಲದೆ ಸರ್ಕಾರವು ಇತ್ತೀಚೆಗೆ ಸುತ್ತೋಲೆಯೊಂದನ್ನು ಹೊರಡಿಸಿ (ಸಂಖ್ಯೆ ಸಿಆಸುಇ 150ಸೇಆಸೇ 2017 ದಿನಾಂಕ 27-10-2017) ಅಭ್ಯರ್ಥಿಯು ಯಾವ ವಿದ್ಯಾರ್ಹತೆ ಹೊಂದಿರುತ್ತಾನೋ ಆ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ನೀಡಲು ಸೂಚಿಸಿದೆ. ಆದುದರಿಂದ ನೀವು ಮತ್ತೆ ನ್ಯಾಯಾಂಗ ಇಲಾಖೆಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ನೀಡಲು ಅರ್ಜಿ ಸಲ್ಲಿಸಬಹುದು.
***
 19-02-18.
ಸರ್ಕಾರಿ ನೌಕರಳಾದ ನನಗೆ 32 ವಾರ 3 ದಿನಗಳಿದ್ದಾಗ (8 ತಿಂಗಳು ತುಂಬಿ, 9ನೇ ತಿಂಗಳು ಬಂದಿದೆ) 2018ರ ಜನವರಿ 17ನೇ ತಾರೀಖು, ಸಿಸೇರಿಯನ್ ಮೂಲಕ ಮೃತಪಟ್ಟ ಹೆಣ್ಣುಮಗುವಿಗೆ ಜನ್ಮ ನೀಡಿದೆ. ಹಾಗಾದರೆ ನಾನು 6 ತಿಂಗಳ ಹೆರಿಗೆ ರಜೆಗೆ ಅರ್ಹಳೇ? ಹೆರಿಗೆ ರಜೆಗೆ ಅರ್ಹಳಾಗದಿದ್ದಲ್ಲಿ ನನ್ನ ಆರೈಕೆಗೆ ಎಷ್ಟು ದಿನಗಳ ರಜೆ ಸಿಗುತ್ತದೆ ಹಾಗೂ 6 ತಿಂಗಳ ಹೆರಿಗೆ ರಜೆ ಅನ್ವಯವಾಗುವುದಾದರೆ ಕೆ.ಸಿ.ಎಸ್.ಆರ್.ನ ಯಾವ ನಿಯಮ, ಉಪನಿಯಮ ಅನ್ವಯವಾಗುತ್ತದೆ?
| ವಾಣಿ ಕಗ್ಗಲೀಪುರ, ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ಮೇರೆಗೆ 180 ದಿನಗಳ ಕಾಲ ಹೆರಿಗೆ ರಜೆ ಲಭ್ಯವಾಗುತ್ತದೆ. 1961ರ ಪ್ರಸೂತಿ ಸೌಲಭ್ಯ ಅಧಿನಿಯಮದ ಪ್ರಕರಣ 3ಬಿ ರಂತೆ 26 ವಾರಗಳ ನಂತರ ಜನನವಾಗುವ ಮಗುವು ಜೀವಂತವಿರಲಿ ಅಥವಾ ಇಲ್ಲದಿರಲಿ ಅದು ಸಾಮಾನ್ಯ ಹೆರಿಗೆ ಎಂದು ಭಾವಿಸಿ ಅಷ್ಟು ದಿನಗಳ ಕಾಲ ಹೆರಿಗೆ ರಜೆ ಸೌಲಭ್ಯ ನೀಡಬೇಕಾಗುತ್ತದೆ. ಈ ನಿಯಮದಂತೆ ನೀವು 180 ದಿನಗಳ ಕಾಲ ಹೆರಿಗೆ ರಜೆ ಸೌಲಭ್ಯ ಪಡೆದು ತದನಂತರ ಕರ್ತವ್ಯಕ್ಕೆ ಹಾಜರಾಗಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.
***
18-02-18.
ನಾನು 35 ವರ್ಷದವಳಾಗಿದ್ದು ಅನುಕಂಪದ ಆಧಾರದಲ್ಲಿ (ದ್ವಿ.ದ.ಸ.) ಹುದ್ದೆಗೆ ನೇಮಕಗೊಂಡಿದ್ದೇನೆ. ಶಿಕ್ಷಕರಾಗಿದ್ದ ನನ್ನ ಗಂಡ ಮರಣ ಹೊಂದಿದ್ದಾರೆ. ಗಂಡ ಜೀವಂತವಿರುವಾಗಲೇ ನಾನು ಎರಡನೇ ಮಗುವಿಗೆ ‘ಸಂತಾನಹರಣ ಶಸ್ತ್ರಚಿಕಿತ್ಸೆ’ ಮಾಡಿಸಿಕೊಂಡಿದ್ದೇನೆ. ಈ ಚಿಕಿತ್ಸೆಯ ವಿಶೇಷ ಭತ್ಯೆಯ ಸೌಲಭ್ಯವನ್ನು ಪಡೆಯಲು ಸಾಧ್ಯವೆ ಎಂಬ ಬಗ್ಗೆ ಗೊಂದಲವಾಗಿದೆ. ಈ ಗೊಂದಲ ನಿವಾರಿಸಿ.
| ನಾಗವೇಣಿ ಮೈಸೂರು.
1-10-1985ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 27 ಎಸ್​ಆರಎಸ್ 85ರ ಮೇರೆಗೆ ಕುಟುಂಬಯೋಜನೆಯನ್ನು ಅನುಸರಿಸುವ ರಾಜ್ಯ ಸರ್ಕಾರಿ ನೌಕರರಿಗೆ ಉತ್ತೇಜನ ನೀಡಲು ಎರಡು ಜೀವಂತ ಮಕ್ಕಳನ್ನು ಹೊಂದಿರುವ ಸರ್ಕಾರಿ ನೌಕರಳು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡರೆ ವೈಯಕ್ತಿಕ ವೇತನ ರೂಪದಲ್ಲಿ ವಿಶಿಷ್ಟ ವೇತನ ಬಡ್ತಿಯನ್ನು ಮಂಜೂರು ಮಾಡಲಾಗುತ್ತದೆ. ಆದರೆ ನೀವು ಸರ್ಕಾರಿ ಸೇವೆಗೆ ಸೇರುವ ಮೊದಲು ಕುಟುಂಬಯೋಜನೆ ಅನುಸರಣೆಗೆ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡಿರುವುದರಿಂದ ಈ ವಿಶೇಷ ವೇತನ ಬಡ್ತಿ ಲಭ್ಯವಾಗುವುದಿಲ್ಲ.
***
17-02-18.
 ನಾನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ 24 ವರ್ಷ ಸೇವೆ ಸಲ್ಲಿಸಿದ್ದೇನೆ. 47 ವರ್ಷದ ನಾನು ಅವಿವಾಹಿತಳಾಗಿದ್ದು ಪುತ್ರನನ್ನು ‘ದತ್ತಕ’ ತೆಗೆದುಕೊಂಡರೆ ಆತನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಸಿಗಬಹುದೆ? ಎಷ್ಟು ವಯಸ್ಸಿನವರನ್ನು ‘ದತ್ತು’ ತೆಗೆದುಕೊಳ್ಳಬೇಕು ?
ಎನ್.ಕೆ. ಗಾಯತ್ರಿ ಶಿವಮೊಗ್ಗ.
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಗಳು 1996ರ ನಿಯಮ 3(3) ಪ್ರಕಾರ ಮೃತ ಸರ್ಕಾರಿ ನೌಕರನ ದತ್ತು ಮಗ ಅಥವಾ ದತ್ತು ಮಗಳು ಈ ನಿಯಮಾವಳಿ ರೀತ್ಯ ಅನುಕಂಪದ ಆಧಾರದ ಮೇಲೆ ಅರ್ಹರಾಗುವುದಿಲ್ಲ. ನೀವು ಐದು ವರ್ಷದೊಳಗಿನ ದತ್ತುಪುತ್ರ ಅಥವಾ ಪುತ್ರಿಯನ್ನು ತೆಗೆದುಕೊಂಡು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 302ರ ಪ್ರಕಾರ ನಾಮನಿರ್ದೇಶನ ಮಾಡಿದರೆ ನಿಮ್ಮ ಆಕಸ್ಮಿಕ ನಿಧನದಿಂದ ಮರಣ ಉಪದಾನ ಕುಟುಂಬ ನಿವೃತ್ತಿ ವೇತನ ಮುಂತಾದ ಪಿಂಚಣಿ ಸೌಲಭ್ಯಗಳು ಲಭ್ಯ.
***
16-02-2018.
 ನಾನು 1989ರಲ್ಲಿ ಅಂಗವಿಕಲರ ಕೋಟಾದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಎಂದು ಆಯ್ಕೆ ಆಗಿದ್ದೇನೆ. 54 ವರ್ಷದ ನಾನು ನರದೌರ್ಬಲ್ಯದಿಂದ ಕೆಲಸ ಮಾಡಲು ಅಸಮರ್ಥನಾಗಿದ್ದೇನೆ. ಯಾವ ಆಧಾರದ ಮೇಲೆ ಸ್ವಯಂನಿವೃತ್ತಿ ಪಡೆದರೆ ಮಗನಿಗೆ ಅನುಕಂಪದ ನೌಕರಿ ದೊರೆಯುತ್ತದೆ?
– ಪಿ.ಎಚ್. ಪಾಟೀಲ್ ಬೆಳಗಾವಿ.
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕಾತಿ) ನಿಯಮಗಳು 1996ರ ನಿಯಮ 3ಎ ಪ್ರಕಾರ ವೈದ್ಯಕೀಯ ಕಾರಣಗಳ ಮೇಲೆ ನಿವೃತ್ತಿ ಹೊಂದಿದ ಸರ್ಕಾರಿ ನೌಕರನ ಅವಲಂಬಿತರ ನೇಮಕಾತಿಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಅದರಂತೆ ಸರ್ಕಾರಿ ನೌಕರನು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಶಾಶ್ವತ ಅಸಮರ್ಥತೆ ಉಂಟಾಗಬೇಕಾಗುತ್ತದೆ. ಅದು ಸರ್ಕಾರಿ ನೌಕರನು ಇತರ ಕರ್ತವ್ಯ ನಿರ್ವಹಿಸಲು ಅಸಮರ್ಥನಾಗಿರುವುದಕ್ಕೆ ವೈದ್ಯಕೀಯ ಮಂಡಳಿಯ ಪ್ರಮಾಣಪತ್ರ ಅವಶ್ಯಕವಾಗಿರುತ್ತದೆ. ಆದರೆ ನೀವು ನರದೌರ್ಬಲ್ಯದಿಂದ ಕೆಲಸ ಮಾಡುತ್ತಿದ್ದು, ಇದು ನಿಮ್ಮ ಕರ್ತವ್ಯ ನಿರ್ವಹಣೆಯಿಂದ ಉಂಟಾದ ಅನಾರೋಗ್ಯವಲ್ಲವಾದ್ದರಿಂದ ನೀವು ಸ್ವಯಂನಿವೃತ್ತಿ ತೆಗೆದುಕೊಂಡರೂ ನಿಮ್ಮ ಮಗನಿಗೆ ಅನುಕಂಪದ ನೌಕರಿ ದೊರಕುವುದಿಲ್ಲ.
***
15-02-2018.
 ನಾನು ಕೌಟುಂಬಿಕ ಕಲಹದಿಂದ ಬಳಲುತ್ತಿದ್ದೇನೆ. ನನ್ನ ಮರಣದ ನಂತರ ಬರುವ ಸಂಬಳ, ಉಪದಾನ, ಪಿಂಚಣಿ, ಅನುಕಂಪದ ನೌಕರಿ ಇನ್ನಿತರೆ ನಗದು ಮತ್ತು ಸೌಲಭ್ಯಗಳನ್ನು ಹೆಂಡತಿ ಮತ್ತು ಮಕ್ಕಳಿಗೆ ಹೊರತುಪಡಿಸಿ ಬೇರೆಯವರಿಗೆ (ಅಣ್ಣ/ಅಕ್ಕ) ಸಲ್ಲಿಕೆಯಾಗುವಂತೆ ಮಾಡಲು ಅವಕಾಶ ಇದೆಯೆ? ವೈಯಕ್ತಿಕವಾಗಿ ವಿಲ್ ಮಾಡಿದಲ್ಲಿ ಕೆಸಿಎಸ್​ಆರ್ ನಿಬಂಧನೆಗಳಿಂದ ಅಡ್ಡಿಯಾಗುವುದೆ?
| ಸುರೇಶ್​ಬಾಬು ದಾವಣಗೆರೆ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 302ರಂತೆ; ಸರ್ಕಾರಿ ನೌಕರನ ಸಂದರ್ಭದಲ್ಲಿ ಪತ್ನಿ ಮಕ್ಕಳು 18 ವರ್ಷದೊಳಗಿನ ಸಹೋದರ /ಸಹೋದರಿಯರು; ಅವಿವಾಹಿತ/ ವಿಧವೆ/ವಿಚ್ಛೇದಿತ ಸಹೋದರಿಯರು ಒಳಗೊಂಡಿರುತ್ತಾರೆ. ಈ ನಿಯಮದಡಿ ಸರ್ಕಾರಿ ನೌಕರನು ಯಾರಿಗೆ ನಾಮನಿರ್ದೇಶನ ಮಾಡಿದರೂ ನಿಯಮ 302(5-ಎ) ಪ್ರಕಾರ ಪ್ರತಿಯೊಬ್ಬ ನೌಕರನು ಮದುವೆಗೆ ಮುಂಚೆ ಮಾಡಿದ ನಾಮನಿರ್ದೇಶನವು ಮದುವೆಯ ನಂತರ ತಾನಾಗಿ ಅನೂರ್ಜಿತವಾಗುವುದು ಮತ್ತು ಪತ್ನಿಯ ಹೆಸರಿನಲ್ಲಿ ನಾಮನಿರ್ದೇಶನವಾಗಿದೆ ಎಂದು ಭಾವಿಸತಕ್ಕದ್ದು ಎಂದು ಸೂಚಿಸಲಾಗಿದೆ. ನೀವು ಸೇವಾಪುಸ್ತಕದಲ್ಲಿ ಸಹೋದರ/ಸಹೋದರಿಯರ ಹೆಸರನ್ನು ಹಾಗೂ ವೈಯಕ್ತಿಕವಾಗಿ ವಿಲ್ ಮಾಡಿದರೆ ಅದು ಅಸಿಂಧುವಾಗುತ್ತದೆ.
***
 14-02-2018.
ನಾನು 2012ರ ಸೆಪ್ಟೆಂಬರ್ 21ರಂದು ಉದ್ಯೋಗಕ್ಕಾಗಿ ನ್ಯಾಯಾಂಗ ಇಲಾಖೆಗೆ ಸೇರಿದೆ. ಈಗ ನನ್ನ ವಯಸ್ಸು 40. ನಾನು ಇಲಾಖಾ ಪರೀಕ್ಷೆಯ ಮೂಲಕ ಎಫ್​ಡಿಎ/ಎಸ್​ಡಿಎ ಪರೀಕ್ಷೆ ತೆಗೆದುಕೊಳ್ಳಬಹುದೆ? ನೌಕರಿಗೆ ಸೇರಿದಾಗ ನನ್ನ ವಯಸ್ಸು 35 ವರ್ಷ 2 ತಿಂಗಳಾಗಿತ್ತು. ಸೂಕ್ತ ಪರಿಹಾರ ತಿಳಿಸಿ.
| ಸೌಮ್ಯ ಎನ್. ತುಮಕೂರು.
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು 1977 ನಿಯಮ 6ರಂತೆ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ 40 ವರ್ಷ, ಹಿಂದುಳಿದ ವರ್ಗಕ್ಕೆ 38 ವರ್ಷ ಹಾಗೂ ಸಾಮಾನ್ಯ ವರ್ಗಕ್ಕೆ 35 ವರ್ಷ ಮಿತಿಯನ್ನು ನಿಗದಿಪಡಿಸಲಾಗಿದೆ. ಸರ್ಕಾರಿ ಸೇವೆಯಲ್ಲಿರುವ ನೌಕರನು ಅವನು ಸಲ್ಲಿಸಿದ ಸೇವಾವಧಿ ಅಥವಾ ಗರಿಷ್ಠ 10 ವರ್ಷಗಳಿಗಿಂತ ಮೀರದಷ್ಟು ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಆದುದರಿಂದ ನೀವು ಸಲ್ಲಿಸಿದ ಸೇವಾವಧಿಯನ್ನು ಈ ಗರಿಷ್ಠ ವಯೋಮಿತಿಗೆ ಸೇರಿಸಿ ನಿಯಮ 11ರಂತೆ ಪೂರ್ವಾನುಮತಿ ಪಡೆದು ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕವನ್ನು ನೋಡಿ.
****
13-02-18.
 ಪ್ರಾಥಮಿಕ ಶಾಲಾ ಪ್ರಧಾನ ಗುರುಗಳು ಸಹಶಿಕ್ಷಕರಿಗೆ ಗರಿಷ್ಠ ಎಷ್ಟು ಸಾಂರ್ದಭಿಕ ರಜೆಗಳನ್ನು ಮಂಜೂರು ಮಾಡಲು ಬರುತ್ತದೆ? ಶನಿವಾರ ಮತ್ತು ಸೋಮವಾರ ಸಾಂರ್ದಭಿಕ ರಜೆ ಹಾಕಿದ್ದರೆ ಭಾನುವಾರವೂ ಸಾಂರ್ದಭಿಕ ರಜೆಯಾಗಿ ಪರಿವರ್ತನೆಯಾಗುತ್ತದೆಯೆ?
| ಧರೆಪ್ಪ ಅಂಬಗೆರೆ, ಸುರಪುರ, ಯಾದಗಿರಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ – (ಬಿ)ಯ ನಿಯಮ (1)ರ ಪ್ರಕಾರ ಶಾಲಾ ಪ್ರಧಾನ ಗುರುಗಳು ಒಂದು ಸಲಕ್ಕೆ ಗರಿಷ್ಠ ಏಳು ದಿನಗಳಷ್ಟು ಸಾಂರ್ದಭಿಕ ರಜೆಯನ್ನು ಮಂಜೂರು ಮಾಡಬಹುದು. ಆದರೆ ಭಾನುವಾರ ಸಾರ್ವತ್ರಿಕ ರಜೆ ಆಗಿರುವುದರಿಂದ ಅದು ಸಾಂರ್ದಭಿಕ ರಜೆಯಾಗಿ ಪರಿವರ್ತನೆಯಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.
***
 12-02-18.
ನನ್ನ ಗೆಳೆಯನ ತಂದೆ ಆಕಸ್ಮಿಕವಾಗಿ ಮರಣ ಹೊಂದಿದ್ದಾರೆ. ತಾಯಿ ಇನ್ನೂ ಕೆಲಸದಲ್ಲಿದ್ದಾರೆ. ನನ್ನ ಗೆಳೆಯನಿಗೆ ತಂದೆಯ ಅನುಕಂಪದ ನೌಕರಿ ಹಾಗೂ ಆರ್ಥಿಕ ಸೌಲಭ್ಯ ದೊರೆಯಬಹುದೆ?
| ತೋಟಗಂಟಿ ಸಿದ್ಧಪ್ಪ ಹಿರೇಕೆರೂರು, ಹಾವೇರಿ.
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ನಿಯಮ 3ರ ಮೇರೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಲು ನಿಮ್ಮ ಗೆಳೆಯ ಅರ್ಹರಾಗಿರುತ್ತಾರೆ. ಆದರೆ ನಿಯಮ 4ರಲ್ಲಿ ತಿಳಿಸಿದಂತೆ ಅವರ ಕೌಟುಂಬಿಕ ಆದಾಯವು ಮೃತ ಸರ್ಕಾರಿ ನೌಕರನ ನಿಧನದ ದಿನದಂದು ಪ್ರಥಮ ದರ್ಜೆಸಹಾಯಕ ವೇತನ ಶ್ರೇಣಿಯ ಸರಾಸರಿ ವೇತನಕ್ಕೆ ಬೆಂಗಳೂರಿನಲ್ಲಿ ಅನ್ವಯವಾಗುವ ಮನೆಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಹಾಗೂ ತುಟ್ಟಿ ಭತ್ಯೆ ಒಳಗೊಂಡಂತೆ ವಾರ್ಷಿಕ ಆದಾಯವು ನಾಲ್ಕು ಲಕ್ಷ ಮೀರಬಾರದು ಹಾಗೂ ಆರ್ಥಿಕ ಸಂಕಷ್ಟದಲ್ಲಿರಬೇಕು. ಅವರ ತಂದೆಯ ಆಕಸ್ಮಿಕ ಮರಣದಿಂದ ಆರ್ಥಿಕ ಸೌಲಭ್ಯವನ್ನು ಅವರ ತಾಯಿ ಪಡೆಯಲು ಅರ್ಹರಾಗಿರುತ್ತಾರೆ.
***
 11-02-2018.
ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ 2007ರ ಮೇ 14ರಂದು ಸೇವೆಗೆ ಸೇರಿ ಕಾನ್ಸ್​ಟೇಬಲ್ (ಪಿ.ಸಿ.) ಆಗಿ ಒಂದು ವರ್ಷ ಮೂರು ತಿಂಗಳು ಸೇವೆ ಸಲ್ಲಿಸಿ ಪೊಲೀಸ್ ಇಲಾಖೆಯ ಸೂಕ್ತ ಅನುಮತಿ ಪಡೆದು ಕೆ.ಸಿ.ಎಸ್.ಆರ್. ನಿಯಮ 252(ಬಿ) ರೀತ್ಯ ಮುಂದುವರಿಸಿಕೊಂಡು ಬಂದಿರುತ್ತೇನೆ. ಪೊಲೀಸ್ ಇಲಾಖೆಯ ಸೇವಾವಹಿಯನ್ನು ಶಿಕ್ಷಣ ಇಲಾಖೆಗೂ ಮುಂದುವರಿಸಿಕೊಂಡು ಬಂದದ್ದು ಇರುತ್ತದೆ. ಆದರೆ ನನಗೆ ಕೆ.ಸಿ.ಎಸ್.ಆರ್. ಯಾವ ನಿಯಮದ ಪ್ರಕಾರ ಹಿಂದಿನ ಸೇವೆ ಹಾಗೂ ಸೇವಾವಹಿಯಲ್ಲಿರುವಂಥ ಗಳಿಕೆ ರಜೆ ಹಾಗೂ ಅರ್ಧ ವೇತನ ರಜೆಗಳ ಸೌಲಭ್ಯ ಪಡೆಯಬಹುದೆ?
| ಈರಣ್ಣ ಎಂ. ಜಾಡರ ಶಿರಹಟ್ಟಿ ಗದಗ.
ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252ಬಿ ಪ್ರಕಾರ ಪೂರ್ವಾನುಮತಿ ಪಡೆದು ಕರ್ತವ್ಯದಿಂದ ಬಿಡುಗಡೆ ಹೊಂದಿರುವುದರಿಂದ ನೀವು ಪ್ರೌಢಶಾಲೆಯಲ್ಲಿ ಹಿಂದಿನ ಸೇವಾವಧಿಯಲ್ಲಿ ಗಳಿಸಿದ ಗಳಿಕೆ ರಜೆ, ಅರ್ಧವೇತನ ರಜೆ ಸೌಲಭ್ಯಗಳಲ್ಲದೆ ನೂತನ ಪಿಂಚಣಿ ಯೋಜನೆ (ಎನ್​ಪಿಎಸ್) ಮತ್ತು ಕೆಜಿಐಡಿ ಸಹ ಮುಂದುವರಿಯುತ್ತದೆ. ಆದುದರಿಂದ ನಿಮ್ಮ ಹಿಂದಿನ ಸೇವೆ ಈ ಸೌಲಭ್ಯಗಳಿಗೆ ಪರಿಗಣಿಸಿ ಪುನಃ ಪ್ರಸ್ತಾವನೆ ಸಲ್ಲಿಸಲು ಕೋರಬಹುದು.
***
10-02-2018.
ನನ್ನ ಸ್ನೇಹಿತರೊಬ್ಬರು ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಾಲೆ ಗ್ರೇಡ್-2ರಿಂದ ಪ್ರೌಢಶಾಲೆಗೆ ಗ್ರೇಡ್ 1 ಹುದ್ದೆಗೆ ನವೆಂಬರ್ 8ರಂದು ಬಡ್ತಿ ಹೊಂದಿದ್ದು, 2015ರ ನವೆಂಬರ್ 7ಕ್ಕೆ 20 ವರ್ಷ ಪೂರ್ಣಗೊಂಡಿರುತ್ತದೆ. ಆದ್ದರಿಂದ ನನ್ನ ಸ್ನೇಹಿತರು 20 ವರ್ಷದ ಹೆಚ್ಚುವರಿ ವೇತನ ಬಡ್ತಿಗೆ ಅರ್ಹರೆ?
| ದಿನೇಶ್ ಕೆ.ಆರ್. ನಗರ, ಮೈಸೂರು.
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಎಫ್ ಡಿ 13 ಎಸ್​ಆರ್​ಪಿ 2002 ದಿನಾಂಕ 9-5-2002ರ ಕಂಡಿಕೆ 6(2)(ಆ) ಈಗಾಗಲೇ ಕನಿಷ್ಠ ಒಂದು ಪದೋನ್ನತಿಯನ್ನು ಪಡೆದಿರುವ ಸರ್ಕಾರಿ ನೌಕರರು ಈ 20 ವರ್ಷದ ಹೆಚ್ಚುವರಿ ವೇತನ ಬಡ್ತಿಗೆ ಅರ್ಹರಾಗುವುದಿಲ್ಲ ಎಂದು ತಿಳಿಸಲಾಗಿದೆ. ಆದುದರಿಂದ ನಿಮ್ಮ ಸ್ನೇಹಿತರು ಈ 20 ವರ್ಷದ ಹೆಚ್ಚುವರಿ ವೇತನ ಬಡ್ತಿಗೆ ಅರ್ಹರಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.
***
 09-02-2018.
ಕಳೆದ ವರ್ಷ ಅಕ್ಟೋಬರ್ 29ರಂದು ನಮ್ಮ ಮಾವ ದೈವಾಧೀನರಾದರು. ಅವರು ಪ್ರಾಥಮಿಕ ಶಾಲೆಯಲ್ಲಿ ಬಡ್ತಿ ಮುಖ್ಯಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನೂ ಸೇವೆ ಒಂದು ವರ್ಷ ಇತ್ತು. ಅವರ ಮಗ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಡಿಪ್ಲೊಮಾ ಆಗಿದೆ. ಅವರಿಗೆ ಯಾವ ಹುದ್ದೆ ದೊರೆಯಬಹುದು? ಶಿಕ್ಷಣ ಇಲಾಖೆಯಿಂದ ಬೇರೆ ಇಲಾಖೆಗೆ ಅನುಕಂಪದ ಹುದ್ದೆಯನ್ನು ಬದಲಾಯಿಸಿಕೊಳ್ಳಬಹುದೆ?
| ಮಹೇಶ್ ಕುಂಚಿಗನಾಳ ಚಿತ್ರದುರ್ಗ.
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ನಿಯಮ 3ರ ಮೇರೆಗೆ ಅವರ ಪುತ್ರ ಇಂಜಿನಿಯರಿಂಗ್ ಪದವೀಧರರಾಗಿದ್ದರೆ ಅವರು ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅರ್ಹರಾಗುತ್ತಾರೆ. ಶಿಕ್ಷಣ ಇಲಾಖೆಯಿಂದ ಬೇರೆ ಇಲಾಖೆಗೆ ಅನುಕಂಪದ ಹುದ್ದೆಯನ್ನು ಬದಲಾಯಿಸಿಕೊಳ್ಳಲು ನಿಯಮಾವಳಿಯಲ್ಲಿ ಅವಕಾಶವಿಲ್ಲ. ಆದರೆ ಆ ಇಲಾಖೆಯಲ್ಲಿ ಹುದ್ದೆ ಇಲ್ಲವೆಂದು ಪ್ರಾದೇಶಿಕ ಆಯುಕ್ತರಿಗೆ ಸಂಬಂಧಿತ ನೇಮಕಾತಿ ಪ್ರಾಧಿಕಾರ ತಿಳಿಸಿದರೆ ಹುದ್ದೆಯನ್ನು ಬದಲಾಯಿಸಿಕೊಳ್ಳಬಹುದು. 
***
 08-02-2018.
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು, 2010ರಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ಮೊದಲ ಮಗುವಿನ ಜನನ 2014ರ ಬೇಸಿಗೆ ರಜೆಯಲ್ಲಾಗಿದ್ದು, ಪಿತೃತ್ವ ರಜೆಯನ್ನು ಪಡೆದಿಲ್ಲ. 2018ರ ಫೆಬ್ರವರಿ ತಿಂಗಳಿನಲ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು ಪ್ರಥಮ ಪಿತೃತ್ವದ ರಜೆ ಪಡೆಯಬಹುದಾ ಅಥವಾ ದ್ವಿತೀಯ ಪಿತೃತ್ವ ರಜೆ ಪಡೆಯಬಹುದಾ? ಮಾಹಿತಿ ನೀಡಿ.
| ಅಮೋಘ ಪೂಜಾರಿ ಮಂಗಳೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135 ಬಿ ಪ್ರಕಾರ ಪುರುಷ ಸರ್ಕಾರಿ ನೌಕರರಿಗೆ ಅವರ ಪತ್ನಿಯ ಹೆರಿಗೆಯ ಪ್ರಾರಂಭದಲ್ಲಿ 15 ದಿನಗಳ ಕಾಲ ಪಿತೃತ್ವದ ರಜೆಯನ್ನು ನೀಡಬಹುದು. ಎರಡು ಅಥವಾ ಅದಕ್ಕಿಂತ ಹೆಚ್ಚು ಜೀವಂತ ಮಕ್ಕಳಿರುವ ಸರ್ಕಾರಿ ನೌಕರರಿಗೆ ಈ ರಜೆ ದೊರೆಯುವುದಿಲ್ಲ. ಆದುದರಿಂದ ನೀವು ದ್ವಿತೀಯ ಮಗುವಿಗೆ ಮೊದಲ ಪಿತೃತ್ವದ ರಜೆ ಪಡೆದುಕೊಳ್ಳದಿದ್ದರೂ ದ್ವಿತೀಯ ಪಿತೃತ್ವ ರಜೆಯನ್ನು ಬಳಸಿಕೊಳ್ಳಬಹುದು.
***
 07-02-2018.
ನಾನು ಸರ್ಕಾರಿ ಪ್ರಾಥಮಿಕ ಸೇವಾ ಶಿಕ್ಷಕಿಯಾಗಿದ್ದೇನೆ. ನನಗೆ ಏಳು ತಿಂಗಳ ಮಗುವಿದ್ದು, ಕೆಲಸದ ಅವಧಿಯಲ್ಲಿ ಮಗುವಿಗೆ ಹಾಲುಣಿಸಲು ಮುಖ್ಯಶಿಕ್ಷಕರು ಅನುಮತಿಸುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಾವಳಿಯು ರಾಜ್ಯ ಸರ್ಕಾರಿ ನೌಕರರಿಗಿಲ್ಲ ಎಂದು ಮೇಲಧಿಕಾರಿಗಳು ತಿಳಿಸಿದ್ದಾರೆ. ಶಿಶುಪಾಲನೆಗೆ ಸಂಬಂಧಿಸಿದಂತೆ ಕೆಲಸದ ಅವಧಿಯಲ್ಲಿ ವಿರಾಮ ಪಡೆಯಲು ಅವಕಾಶವಿಲ್ಲವೆ? ಯಾವುದಾದರೂ ಸರ್ಕಾರಿ ಆದೇಶ ಅಥವಾ ನಿಯಮವಿದ್ದರೆ ತಿಳಿಸಿ.
| ನೇಮಿತ್ ಸಿದ್ದಿಕಾ ಆವಲಹಳ್ಳಿ, ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಯಲ್ಲಿ ಮಹಿಳಾ ನೌಕರರಿಗೆ ಪ್ರಸೂತಿ ರಜೆಯ ನಂತರ ಆ ಮಗುವಿಗೆ ಹಾಲುಣಿಸಲು ಅವಕಾಶ ಕಲ್ಪಿಸುವ ಯಾವುದೇ ನಿಯಮಾವಳಿ ಇಲ್ಲ. ಆದರೆ 1961ರ ಪ್ರಸೂತಿ ಸೌಲಭ್ಯ ಅಧಿನಿಯಮದಡಿಯಲ್ಲಿ ಮಗುವಿಗೆ 15 ತಿಂಗಳಾಗುವವರೆಗೆ ಹಾಲುಣಿಸಲು ಅವಕಾಶ ನೀಡಬೇಕೆಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ನೀವು ನಿಮ್ಮ ಮೇಲಧಿಕಾರಿಗಳ ಬಳಿ ಈ ಬಗ್ಗೆ ವಿನಂತಿ ಮಾಡಿಕೊಳ್ಳಬಹುದು. 
***
 06-02-2018.
ನನ್ನ ಪತ್ನಿಯು ಪ್ರೌಢಶಾಲಾ ಸಹಶಿಕ್ಷಕಿಯಾಗಿದ್ದಾಳೆ. ಅವಳು 2017ರ ಫೆಬ್ರವರಿ ಏಳರಿಂದ ಹೆರಿಗೆರಜೆ ಸಲ್ಲಿಸಿದ್ದು 2017ರ ಜುಲೈ ಎರಡರಂದು ಮಗು ಜನಿಸಿದೆ. ಈ ಹೆರಿಗೆರಜೆಯು ಯಾವಾಗಿನಿಂದ ಪ್ರಾರಂಭವಾಗುತ್ತದೆ? ದಯವಿಟ್ಟು ಇದರ ಬಗ್ಗೆ ಸೂಕ್ತ ಪರಿಹಾರ ಸೂಚಿಸಿ.
| ಮಲ್ಲಿಕಾರ್ಜುನ್ ಶೋರಾಪುರ, ಯಾದಗಿರಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135 ರಂತೆ ಮಹಿಳಾ ಸರ್ಕಾರಿ ನೌಕರರಿಗೆ ಈ ಹೆರಿಗೆರಜೆಯನ್ನು ಅದರ ಆರಂಭದ ದಿನಾಂಕದಿಂದ 180 ದಿನಗಳವರೆಗೆ ಮಂಜೂರು ಮಾಡಲಾಗುತ್ತದೆ. ಆದಕಾರಣ ನೀವು ಫೆಬ್ರವರಿ ಏಳರಿಂದ ಅರ್ಜಿ ಸಲ್ಲಿಸಿರುವುದರಿಂದ, ವೈದ್ಯಕೀಯ ಪ್ರಮಾಣತ್ವದ ಆಧಾರದ ಮೇಲೆ ಈ ಹೆರಿಗೆ ರಜೆಯನ್ನು ಮಂಜೂರು ಮಾಡಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
***
05-02-2018.
ನಾನು 2012ರಲ್ಲಿ ಬೆರಳಚ್ಚುಗಾರನಾಗಿ ಸರ್ಕಾರಿ ಸೇವೆಗೆ ಸೇರಿದ್ದೇನೆ. ಈಗ ಕನ್ನಡ ಶೀಘ್ರಲಿಪಿ ಪ್ರೌಢದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದು ಶೀಘ್ರಲಿಪಿಗಾರರ ಹುದ್ದೆಗೆ ಪದೋನ್ನತಿ ಹೊಂದಲು ಅರ್ಹಳೆ? ಅಕೌಂಟ್ಸ್ ಹೈಯರ್ ಪರೀಕ್ಷೆ ಪಾಸಾಗಿದ್ದು ಜನರಲ್ ಲಾ ಮತ್ತಿತರ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿಲ್ಲ.
| ಜಯಲಕ್ಷ್ಮಿ ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ (ಶೀಘ್ರಲಿಪಿಗಾರರ ಮತ್ತು ಬೆರಳಚ್ಚುಗಾರರ ನೇಮಕಾತಿ) ನಿಯಮಗಳು 1983ರ ಪ್ರಕಾರ ಶೀಘ್ರಲಿಪಿಗಾರರ ಹುದ್ದೆಗೆ ಪದೋನ್ನತಿ ಹೊಂದಲು ಕನ್ನಡ ಶೀಘ್ರಲಿಪಿ, ಪ್ರೌಢದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಗತ್ಯವಾಗಿದೆ. ಅದಲ್ಲದೆ ಅಕೌಂಟ್ಸ್ ಹೈಯರ್ ಹುದ್ದೆಯಲ್ಲೂ ಉತ್ತೀರ್ಣರಾಗಿದ್ದರೆ ನೀವು ಈ ಶೀಘ್ರಲಿಪಿಗಾರರ ಹುದ್ದೆಗೆ ಪದೋನ್ನತಿಯನ್ನು ಪಡೆಯಬಹುದು.
***
04-02-2018.
ನಾನು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಕುಲಸಚಿವನಾಗಿ ಕೆಲಸ ಮಾಡುತ್ತಿದ್ದು 2017ರ ಡಿಸೆಂಬರ್​ಗೆ 6 ವರ್ಷ ಪೂರೈಸಿದ್ದೇನೆ. ನಮ್ಮ ವಿಶ್ವವಿದ್ಯಾಲಯದ ನೇಮಕಾತಿ ನಿಯಮಗಳನ್ವಯ 5 ವರ್ಷ ಪೂರೈಸಿದವರಿಗೆ ಪದೋನ್ನತಿ ನೀಡಬೇಕೆಂದಿದೆ. ಆದರೆ ವಿಶ್ವವಿದ್ಯಾಲಯದಲ್ಲಿ ಸಹಕುಲಸಚಿವ ಹುದ್ದೆಗಳು ಇಲ್ಲದಿರುವುದರಿಂದ ಪದೋನ್ನತಿ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಂಖ್ಯಾತೀತವಾಗಿ ಸಹಕುಲಸಚಿವ ಹುದ್ದೆ ಸೃಷ್ಟಿಸಿ ಪದೋನ್ನತಿ ನೀಡಬಹುದೆ?
| ಶಿವಾನಂದ ಮಾರಡಗಿ ಶಿವಮೊಗ್ಗ.
ಕರ್ನಾಟಕ ಸರ್ಕಾರಿ ಸೇವಾನಿಯಮಾವಳಿಯ ನಿಯಮ 100ರ ರೀತ್ಯ ಹೀಗಿದೆ: ಒಂದು ಸಂಖ್ಯಾತೀತ ಹುದ್ದೆ ಸೃಷ್ಟಿಸಲು ಸಕ್ಷಮ ಅಧಿಕಾರಿಯ ಅಭಿಪ್ರಾಯ ಹೀಗಿರಬೇಕು. ಒಂದು ಕ್ರಮಬದ್ಧ ಖಾಯಂ ಹುದ್ದೆಯ ಹಕ್ಕನ್ನು ಹೊಂದಲು ಅರ್ಹನಾದ, ಆದರೆ ಸಾಂರ್ದಭಿಕ ಕಾರಣಗಳಿಂದಾಗಿ ಅಂಥ ಹುದ್ದೆ ಹೊಂದಲು ಸಾಧ್ಯವಾಗದ ಸರ್ಕಾರಿ ನೌಕರನ ಅರ್ಜಿಗೆ ಅವಕಾಶ ನೀಡಲು ಸೃಷ್ಟಿಸಬಹುದು. ಆದರೆ ಅದನ್ನು ಸೃಷ್ಟಿಸುವ ಅಥವಾ ಆ ನಂತರ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿಯಾದರೆ ಸೃಷ್ಟಿಸತಕ್ಕದ್ದಲ್ಲ ಎನ್ನಲಾಗಿದೆ. ಹೀಗಾಗಿ ನಿಮ್ಮ ವಿ.ವಿ.ಯಲ್ಲಿ ಈ ಸಂಖ್ಯಾತೀತ ಹುದ್ದೆ ಸೃಷ್ಟಿಸಲು ಸಾಧ್ಯವಿಲ್ಲ.
***
 03-02-2018.
ನಾನು ಸರ್ಕಾರಿ ಪ್ರೌಢಶಾಲಾ ಶಿಕ್ಷಕ. ನನ್ನ ಮೂಲ ವೇತನ ರೂ. 24 ಸಾವಿರ ರೂ.ಗಳು. ನಾನು ಎಫ್​ಡಿಎ ಆಯ್ಕೆಯಾದರೆ ನನ್ನ ಮೂಲ ವೇತನ ಎಷ್ಟಾಗುತ್ತದೆ? ದಯವಿಟ್ಟು ತಿಳಿಸಿ.
| ಶಿವು ಬೆಂಗಳೂರು.
ಕರ್ನಾಟಕ ಸರ್ಕಾರ ಸೇವಾ ನಿಯಮಾವಳಿಯ ನಿಯಮ 41 (ಎ) ಪ್ರಕಾರ ನೀವು ಸಮಾನ ವೇತನಶ್ರೇಣಿಗೆ ನೇಮಕವಾದರೆ ವೇತನ ರಕ್ಷಣೆ ದೊರಕುತ್ತದೆ. ಇಲ್ಲವಾದರೆ ನೀವು ಪ್ರಥಮ ದರ್ಜೆ ಸಹಾಯಕರ ವೇತನ ಶ್ರೇಣಿಯು ಪ್ರೌಢಶಾಲಾ ಶಿಕ್ಷಕರ ವೇತನ ಶ್ರೇಣಿಗಿಂತ ಕಡಿಮೆಯಾಗಿದ್ದರೆ ನಿಮ್ಮ ವೇತನವನ್ನು ನೀವು ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ಸೇರಿದ ದಿನಾಕದಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಯಲ್ಲಿ ವೇತನವನ್ನು ನಿಗದಿಪಡಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಇದೇ ಲೇಖಕರು ಬರೆದಿರುವ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕವನ್ನು ನೋಡಬಹುದು.
***
04-02-2018.
ನಾನು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಕುಲಸಚಿವನಾಗಿ ಕೆಲಸ ಮಾಡುತ್ತಿದ್ದು 2017ರ ಡಿಸೆಂಬರ್​ಗೆ 6 ವರ್ಷ ಪೂರೈಸಿದ್ದೇನೆ. ನಮ್ಮ ವಿಶ್ವವಿದ್ಯಾಲಯದ ನೇಮಕಾತಿ ನಿಯಮಗಳನ್ವಯ 5 ವರ್ಷ ಪೂರೈಸಿದವರಿಗೆ ಪದೋನ್ನತಿ ನೀಡಬೇಕೆಂದಿದೆ. ಆದರೆ ವಿಶ್ವವಿದ್ಯಾಲಯದಲ್ಲಿ ಸಹಕುಲಸಚಿವ ಹುದ್ದೆಗಳು ಇಲ್ಲದಿರುವುದರಿಂದ ಪದೋನ್ನತಿ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಂಖ್ಯಾತೀತವಾಗಿ ಸಹಕುಲಸಚಿವ ಹುದ್ದೆ ಸೃಷ್ಟಿಸಿ ಪದೋನ್ನತಿ ನೀಡಬಹುದೆ?
| ಶಿವಾನಂದ ಮಾರಡಗಿ ಶಿವಮೊಗ್ಗ.
ಕರ್ನಾಟಕ ಸರ್ಕಾರಿ ಸೇವಾನಿಯಮಾವಳಿಯ ನಿಯಮ 100ರ ರೀತ್ಯ ಹೀಗಿದೆ: ಒಂದು ಸಂಖ್ಯಾತೀತ ಹುದ್ದೆ ಸೃಷ್ಟಿಸಲು ಸಕ್ಷಮ ಅಧಿಕಾರಿಯ ಅಭಿಪ್ರಾಯ ಹೀಗಿರಬೇಕು. ಒಂದು ಕ್ರಮಬದ್ಧ ಖಾಯಂ ಹುದ್ದೆಯ ಹಕ್ಕನ್ನು ಹೊಂದಲು ಅರ್ಹನಾದ, ಆದರೆ ಸಾಂರ್ದಭಿಕ ಕಾರಣಗಳಿಂದಾಗಿ ಅಂಥ ಹುದ್ದೆ ಹೊಂದಲು ಸಾಧ್ಯವಾಗದ ಸರ್ಕಾರಿ ನೌಕರನ ಅರ್ಜಿಗೆ ಅವಕಾಶ ನೀಡಲು ಸೃಷ್ಟಿಸಬಹುದು. ಆದರೆ ಅದನ್ನು ಸೃಷ್ಟಿಸುವ ಅಥವಾ ಆ ನಂತರ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿಯಾದರೆ ಸೃಷ್ಟಿಸತಕ್ಕದ್ದಲ್ಲ ಎನ್ನಲಾಗಿದೆ. ಹೀಗಾಗಿ ನಿಮ್ಮ ವಿ.ವಿ.ಯಲ್ಲಿ ಈ ಸಂಖ್ಯಾತೀತ ಹುದ್ದೆ ಸೃಷ್ಟಿಸಲು ಸಾಧ್ಯವಿಲ್ಲ.
***
02-02-2018.
 ಪತಿಯ ನಿಧನದಿಂದ ನಾನು ಅನುಕಂಪದ ಆಧಾರದ ಮೇಲೆ 2016ರಲ್ಲಿ ದ್ವಿತೀಯ ದರ್ಜೆ ಸಹಾಯಕಳಾಗಿ ಕೆಲಸಕ್ಕೆ ಸೇರಿದ್ದೇನೆ. ನಾನೀಗ ಎರಡನೇ ಮದುವೆಯಾಗಲು ಇಚ್ಛಿಸಿದ್ದೇನೆ. ‘ನೀವು ಅನುಕಂಪದ ಆಧಾರದ ಮೇಲೆ ಪತಿಯ ಹುದ್ದೆಯನ್ನು ಪಡೆದಿರುವುದರಿಂದ ಎರಡನೇ ಮದುವೆಯಾದರೆ ಕೆಲಸ ಕಳೆದುಕೊಳ್ಳುವಿರಿ’ ಎಂದು ಮೇಲಧಿಕಾರಿಗಳು ಹೆದರಿಸುತ್ತಿದ್ದಾರೆ. ನಾನು ಎರಡನೇ ಮದುವೆಯಾಗಹುದೆ? ಕಾನೂನು ತೊಡಕುಗಳಿವೆಯೆ?
| ಸೌಮ್ಯಲತಾ ಮೈಸೂರು.
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ರೀತ್ಯ ಅನುಕಂಪದ ಮೇಲೆ ಪತಿಯ ನೌಕರಿಯನ್ನು ಪಡೆದ ಮಹಿಳೆಯು ಎರಡನೇ ವಿವಾಹವಾದರೆ ಕೆಲಸ ಕಳೆದುಕೊಳ್ಳುತ್ತಾರೆ ಎನ್ನುವ ನಿಯಮವಿಲ್ಲ. ಆದುದರಿಂದ ನೀವು ಯಾವುದೇ ಬೆದರಿಕೆಗೆ ಅಂಜದೆ ಎರಡನೇ ಮದುವೆಯಾಗಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕವನ್ನು ನೋಡಬಹುದು.
***
01-02-2018.
 ವೃಂದ ಮತ್ತು ನೇಮಕಾತಿ ರೀತ್ಯಾ ಗ್ರಾಮಲೆಕ್ಕಾಧಿಕಾರಿ ಹುದ್ದೆಯಿಂದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವೃಂದ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆಯೇ?
| ಚಂದ್ರಕಾಂತ ಕಲಬುರಗಿ.
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 16(ಎ) ರೀತ್ಯ ಸಮಾನ ವೇತನ ಶ್ರೇಣಿಯ ಸಿ ಮತ್ತು ಡಿ ಗುಂಪಿನ ಹುದ್ದೆಗಳಲ್ಲಿರುವ ಸರ್ಕಾರಿ ನೌಕರರು ವೃಂದ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಈ ವೃಂದ ಬದಲಾವಣೆಗೆ ವೈದ್ಯಕೀಯ ಹಾಗೂ ಇನ್ನಿತರ ಸರ್ಕಾರಿ ನೌಕರನ ಇನ್ನಿತರ ಕಾರಣಗಳಿಂದ ವೃಂದ ಬದಲಾವಣೆ ಮಾಡಿಕೊಳ್ಳಬಹುದು.